ಕೋಲ್ಕತ್ತ, ಫೆ. 21 (DaijiworldNews/HR): "ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಕುರಿತು ಕಾನೂನು ರಚಿಸುವಲ್ಲಿ ಕೇಂದ್ರ ಸರ್ಕಾರವು ಕಾರ್ಯಪ್ರವೃತ್ತವಾಗಿದೆ" ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ ಹೇಳಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸರ್ಕಾರವನ್ನು ಉರುಳಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮಗಳು ಹೊಂದಿದ್ದು, ಇವು ಒಡ್ಡಿರುವ ಸವಾಲುಗಳಿಗೆ ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಪರಿಹಾರ ಕಂಡುಹಿಡಿಯಬೇಕು" ಎಂದರು.
ಇನ್ನು "ಈ ನವ ಮಾಧ್ಯಮಗಳನ್ನು ನಿಯಂತ್ರಿಸಲು ಈಗಿರುವ ಕಾನೂನುಗಳಿಂದ ಸಾಧ್ಯವಾಗುವುದಿಲ್ಲ, ಹಾಗಾಗಿ ಹೊಸ ನಿಯಮ-ಕಾನೂನು ರೂಪಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ" ಎಂದು ತಿಳಿಸಿದ್ದಾರೆ.