ಬೆಂಗಳೂರು, ಫೆ.21 (DaijiworldNews/MB) : ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ದೇಶಾದ್ಯಂತದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿರುವುದರಿಂದ, ಕರ್ನಾಟಕ ಸರ್ಕಾರ ಇದರ ನೇತೃತ್ವ ವಹಿಸಲು ನಿರ್ಧರಿಸಿದೆ.
ಪ್ರಸ್ತುತ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ ಅಡಿಯಲ್ಲಿ, ದೇಶಾದ್ಯಂತ ಸುಮಾರು 7,500 ಜನೌಷಧಿ ಕೇಂದ್ರಗಳಿವೆ. ಈ ಪೈಕಿ 850 ಕೇಂದ್ರಗಳು ಕರ್ನಾಟಕದಲ್ಲಿ ಮಾತ್ರ ಇವೆ. 2021 ರ ಅಂತ್ಯದ ವೇಳೆಗೆ 1,000 ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಯೋಜಿಸಿದೆ. ಕರ್ನಾಟಕದಲ್ಲಿ ಪ್ರತಿ ತಿಂಗಳು ಸುಮಾರು 20 ಹೊಸ ಜನೌಷಧ ಕೇಂದ್ರಗಳನ್ನು ತೆರೆಯಲಾಗುತ್ತದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 211 ಕೇಂದ್ರಗಳಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 76 ಇದ್ದು ಇದಕ್ಕಾಗಿ ಮಾರ್ಚ್ 2021 ರ ಅಂತ್ಯದವರೆಗೆ ಸರ್ಕಾರ 125-130 ಕೋಟಿ ರೂ.ಗಳು ಖರ್ಚು ಮಾಡಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಕರಾವಳಿ ಕರ್ನಾಟಕದಲ್ಲಿ ವಿತರಣಾ ಕೇಂದ್ರಗಳಿವೆ.
ಮಾರ್ಚ್ ತಿಂಗಳಲ್ಲಿ ಜನೌಷಧಿಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, "ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ಸಹ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ'' ಎಂದು ಹೇಳಿದರು.
"ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ, ವಿಶೇಷವಾಗಿ ಆರ್ಥಿಕವಾಗಿ ಹಿಂದಿಳುದಿರುವವರಿಗೆ ಮಾತ್ರ ವೈದ್ಯರು ಜನೌಷಧಿಯನ್ನು ಶಿಫಾರಸು ಮಾಡಬೇಕು. ಜನೌಷಧಿಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಇರಲಿದೆ. ಆದರೆ ವೆಚ್ಚ ಕಡಿಮೆ. ಉದಾಹರಣೆಗೆ ಮಧುಮೇಹ ಮತ್ತು ಬಿಪಿ ಇರುವ ಓರ್ವ ವ್ಯಕ್ತಿಯು ಔಷಧಾಲಯಗಳಲ್ಲಿ ಔಷಧಿಗಳನ್ನು ಖರೀದಿಸುವಾಗ ಅದರ ಬೆಲೆ ಸುಮಾರು 2,500 ರಿಂದ 3,000 ರೂ. ಆಗಿರಬಹುದು. ಅದೇ ಔಷಧಿಯನ್ನು ಜನೌಷಧಿ ಕೇಂದ್ರದಲ್ಲಿ ಖರೀದಿಸಿದರೆ ಕೇವಲ 250 ರಿಂದ 300 ರೂ. ಆಗಬಹುದು" ಎಂದು ಹೇಳಿದರು.