ಬೆಂಗಳೂರು, ಫೆ.21 (DaijiworldNews/PY): "ನಾಯಕರು ಹೋದಲ್ಲಿ ಬಂದಲ್ಲಿ ಈ ಬಾರಿ ನಿನಗೆ ಟಿಕೆಟ್ ಎನ್ನುವ ಭರವಸೆಯನ್ನು ಕಾರ್ಯಕರ್ತರಿಗೆ ನೀಡಬಾರದು" ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಗರದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಐವರು ಕಾರ್ಯಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾಯಕರು ಹೋದಲ್ಲಿ ಬಂದಲ್ಲಿ ಈ ಬಾರಿ ನಿನಗೆ ಟಿಕೆಟ್ ಎನ್ನುವ ಭರವಸೆಯನ್ನು ಕಾರ್ಯಕರ್ತರಿಗೆ ನೀಡಬೇಡಿ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ಎಲ್ಲರ ಒಪ್ಪಿಗೆ ಪಡೆದ ಬಳಿಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು" ಎಂದರು.
"ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರ ಮುಂದೆ ಇಡಬೇಕಾಗಿದೆ. ಇದರೊಂದಿಗೆ ಕೃಷಿ ತಿದ್ದುಪಡಿ ಕಾನೂನುಗಳ ವಿಚಾರದ ಬಗ್ಗೆ ಜಾಗೃತಿ ಮೂಡಿಸಬೇಕು" ಎಂದು ಹೇಳಿದರು.
"ಜ.26ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಷಡ್ಯಂತ್ರವೇ ಕಾರಣ" ಎಂದು ಆರೋಪಿಸಿದರು.
"ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯ ಸುತ್ತಮುತ್ತಲು ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಯುವಕನೋರ್ವ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಕೋಟೆಯ ಮೇಲೆ ಹತ್ತು ಧರ್ಮದ ಧ್ವಜ ಹಾರಿಸುವ ತನಕ ಪೊಲೀಸರು ನಿದ್ದೆ ಮಾಡುತ್ತಿದ್ದರೇ?. ಇದರ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ತಿಳಿದಿರಲಿಲ್ಲವೇ?. ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದಾತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರ ಮನೆಯಲ್ಲಿಯೇ ಫೋಟೋ ತೆಗೆಸಿಕೊಂಡಿದ್ದಾನೆ. ಇದರಿಂದ ಅಂದು ನಡೆದ ಘಟನೆ ವ್ಯವಸ್ಥಿತವಾದ ಪಿತೂರಿ ಎಂದು ಸ್ಪಷ್ಟವಾಗುತ್ತದೆ" ಎಂದು ಹೇಳಿದರು.