ಕಲಬುರಗಿ, ಫೆ.21 (DaijiworldNews/PY): "ಅನ್ಯಾಯ ಹಾಗೂ ವಂಚನೆಗೊಳಗಾದ ಸಮುದಾಯಗಳನ್ನು ಗುರುತಿಸಲಾಗುವುದು. ಇದು ಗಂಭೀರವಾದ ಹಾಗೂ ಸೂಕ್ಷ್ಮವಾದ ವಿಚಾರ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ವಿಶೇಷ ಸಮಿತಿಯನ್ನು ರಚನೆ ಮಾಡಿ ವರದಿಯನ್ನು ತರಿಸಿಕೊಳ್ಳಲಾಗುವುದು. ಎಲ್ಲಾ ಸಮುದಾಯಗಳಿಗೂ ಕೂಡಾ ನ್ಯಾಯ ದೊರಕಿಸಿಕೊಡಲಾಗುವುದು. ಅಲ್ಲದೇ ಅನ್ಯಾಯ ವಂಚನೆಗೊಳಗಾದ ಸಮುದಾಯಗಳನ್ನು ಗುರುತಿಸಲಾಗುವುದು. ಉಳಿದ ಸಮುದಾಯಗಳಿಗೆ ಅನ್ಯಾಯವಾಗದಂತೆ ಮುಖ್ಯಮಂತ್ರಿಯವರು ನೋಡಿಕೊಳ್ಳುತ್ತಾರೆ" ಎಂದು ಹೇಳಿದರು.
"ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾಗಿದ್ದು, ಈ ವಿಚಾರದ ಬಗ್ಗೆ ಕಲಬುರಗಿ ಜಿಲ್ಲಾಡಳಿತ ಜೊತೆ ಮಾತುಕತೆ ನಡೆಸುತ್ತೇನೆ. ಕಲಬುರಗಿ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾರಣ ಸೂಕ್ಷ್ಮವಾಗಿದೆ. ಈ ಬಗ್ಗೆ ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿದ್ದು, ಸೋಂಕು ವ್ಯಾಪಿಸದಂತೆ ಬಿಗಿಯಾದ ಮಾರ್ಗಸೂಚಿಗಳನ್ನು ತೆಗೆದುಕೊಳ್ಳುತ್ತೇವೆ. ಲಾಕ್ಡೌನ್ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ" ಎಂದರು.