ಮೈಸೂರು, ಫೆ.21 (DaijiworldNews/MB) : ''ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲ್ಲ, ರಾಮ ಮಂದಿರಕ್ಕೆ ಎಷ್ಟು ದೇಣಿಗೆ ಲಭಿಸಿದೆ'' ಎಂದು ಲೆಕ್ಕ ಕೇಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ''ತಮ್ಮ ಹುಟ್ಟೂರಿನಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ'' ಎಂದು ವರದಿಯಾಗಿದೆ.
ಸಿದ್ದರಾಮನ ಹುಂಡಿಯಲ್ಲಿದ್ದ ಹಳೆಯ ಕಾಲದ ರಾಮಮಂದಿರ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು, ನೂತನ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಕೂಡಾ ಸಹಾಯ ಮಾಡಿದ್ದಾರೆ. ಸುಮಾರು ರೂ.45 ಲಕ್ಷ ವೆಚ್ಚದಲ್ಲಿ 30**40 ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ರಾಮ ನವಮಿಗೆ ತಮ್ಮ ಊರಿನಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಸಿದ್ದರಾಮಯನ ಹುಂಡಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮದ ನಿವಾಸಿ ಮಂಜೇಶ್ ಮಾತನಾಡಿ, ''ಜನರ ನಂಬಿಕೆಗೆ ಗೌರವಿಸಿ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡುತ್ತಿರುವ ಸಿದ್ದರಾಮಯ್ಯನವರಿಗೆ ಧನ್ಯವಾದ'' ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರದ ದೇಣಿಗೆಯ ಲೆಕ್ಕ ಕೇಳಿದ್ದ ಸಿದ್ದರಾಮಯ್ಯನವರು ಅಯೋಧ್ಯೆ ರಾಮ ಮಂದಿರಕ್ಕೆ ನಾನು ದೇಣಿಗೆ ನೀಡಲ್ಲ. ಬೇರೆ ರಾಮ ಮಂದಿರಕ್ಕಾದರೆ ನೀಡುತ್ತೇನೆ ಎಂದು ಹೇಳಿದ್ದರು. ಹಾಗೆಯೇ ಟ್ವೀಟ್ ಮಾಡಿದ್ದ ಅವರು, ''ನಮ್ಮೂರಿನಲ್ಲಿ ನಾನು ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇನೆ. ದೇವರ ಬಗ್ಗೆ ನಮಗೂ ಭಕ್ತಿ ಇದೆ, ನಮ್ಮ ಶ್ರದ್ಧೆ, ನಂಬಿಕೆಗಳು ವೈಯಕ್ತಿಕ ವಿಚಾರಗಳಾಗಿರಬೇಕೇ ಹೊರತು ರಾಜಕೀಯ ಅಸ್ತ್ರಗಳಾಗಬಾರದು. ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೊರಟಿರುವುದು ನಾಚಿಕೆಗೇಡು'' ಎಂದು ದೂರಿದ್ದರು.