ಶ್ರೀನಗರ, ಫೆ. 21 (DaijiworldNews/HR): "ಕಾಶ್ಮೀರದಲ್ಲಿ ರಕ್ತದೋಕುಳಿ ತಡೆಯಲು ಮತ್ತು ಶಾಂತಿ ಕಾಪಾಡಲು ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಬೇಕು" ಎಂದು ಕೇಂದ್ರ ಸರ್ಕಾರವನ್ನು ಫೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಮುಫ್ತಿ, "ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿನ ಹಿಂಸಾಚಾರವನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ" ಎಂದರು.
ಇನ್ನು "ಜಮ್ಮು-ಕಾಶ್ಮೀರದ ಜನ, ಪೊಲೀಸರು ಹಾಗೂ ಯೋಧರು ಪ್ರಾಣ ತ್ಯಾಗ ಮಾಡುತ್ತಿರುವಾಗ, ಇಲ್ಲಿನ ಹಿಂಸಾಚಾರಕ್ಕೆ ಪಾಕ್ ಪ್ರಚೋದನೆ ಕಾರಣ ಎಂದು ಬಿಜೆಪಿ ಹೇಳುತ್ತಿದ್ದು, ಆದಷ್ಟು ಬೇಗ ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗೆ ಮಾತುಕತೆ ಪ್ರಕ್ರಿಯೆಯನ್ನು ಪ್ರಾರಂಭಿಸಿ ರಕ್ತದೋಕುಳಿ ತಡೆಯಲು ಚಿಂತಿಸಬೇಕು" ಎಂದು ಹೇಳಿದ್ದಾರೆ.