ಹಾಸನ, ಫೆ.21 (DaijiworldNews/MB) : ರಾಜ್ಯದಲ್ಲಿ ವಿವಿಧ ಸಮುದಾಯದಗಳು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಈ ನಡುವೆ, ''ಬಿ. ಆರ್. ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ'' ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಹೇಳಿದರು.
ಶನಿವಾರ ನಡೆದ ಹಾಸನ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ಸಂವಿಧಾನದ ಕೆಲವು ಕಾನೂನಿನಲ್ಲಿ ಪ್ರಸ್ತುತತೆ ತಕ್ಕುದಾಗಿಲ್ಲ, ಈ ನಿಟ್ಟಿನಲ್ಲಿ ಸಂವಿಧಾನದ ತಿದ್ದುಪಡಿ ಅನಿವಾರ್ಯವಾಗಿದೆ. ದೇಶವು ಹೊಸ ಕಾಲಕ್ಕೆ ತಕ್ಕುದಾಗಿರಬೇಕು'' ಎಂದು ಹೇಳಿದರು.
''ಸಂವಿಧಾನದ ತಿದ್ದುಪಡಿಯಿಂದಾಗಿ ಸರ್ವರಿಗೆ ಸಮಪಾಲು, ಸಮಬಾಳು ಸಾಧ್ಯವಾಗುತ್ತದೆ. ಈ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಬೇಕು'' ಎಂದು ಮನವಿ ಮಾಡಿದರು.
''ಈ ಕಾಲಕ್ಕೆ ತಕ್ಕಂತಹ ಸಂವಿಧಾನ ಬರೆಯುವ ಪ್ರಯತ್ನ ನಡೆದರೆ ಅದಕ್ಕಿಂತ ಮಹತ್ತರವಾದ ಕಾರ್ಯ ಬೇರೆ ಯಾವುದೂ ಇಲ್ಲ'' ಎಂದು ಹೇಳಿದ್ದಾರೆ.