ಕೆಜಿಎಫ್, ಫೆ. 21 (DaijiworldNews/HR): ಬೆಮಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಶಾಸಕಿ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ಶಾಸಕಿ ಎಂ.ರೂಪಕಲಾ ಅವರ ನಿವಾಸದ ಮುಂದೆ ಧರಣಿ ನಡೆಸಿದ್ದಾರೆ.
ಶಾಸಕಿ ನಿವಾಸದವರೆಗೆ ಕಾಲ್ನಡಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, "ಬೆಮಲ್ ಖಾಸಗೀಕರಣ ಮಾಡಬಾರದು. ಬಿಜಿಎಂಎಲ್ ಪುನರ್ ಸ್ಥಾಪನೆ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಎ.ಆರ್.ಬಾಬು, ಮುಂದಿನ ಬಜೆಟ್ ಅಧಿವೇಶನದಲ್ಲಿ ಶಾಸಕಿ ರೂಪಕಲಾ ಅವರು ಬೆಮಲ್ ಖಾಸಗೀಕರಣದ ವಿರುದ್ಧ ಮಾತನಾಡಬೇಕು, ಕಾರ್ಮಿಕರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ನೇರವಾಗಿ ತರಬೇಕು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಡಬೇಕು" ಎಂದು ಹೇಳಿದ್ದಾರೆ.