ನವದೆಹಲಿ, ಫೆ. 21 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ರದ್ದುಗೊಳಿಸಬೇಕೆಂದು ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯಲ್ಲಿ ಭಾಗವಹಿಸಿದ್ದ ಯಾವ ರಾಜ್ಯಗಳು ಕೂಡಾ ಆಗ್ರಹಿಸಿಲ್ಲ" ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯಲ್ಲಿ ನಡೆದ ಚರ್ಚೆಗಳು ಕೃಷಿ ವಲಯದ ಸಮಸ್ಯೆಗಳ ಬಗ್ಗೆ ಕೇಂದ್ರಿತವಾಗಿದ್ದವು ಎಂದು ಸ್ಪಷ್ಟಪಡಿಸಿದ ಅವರು ಈ ಸಭೆಯಲ್ಲಿ ಯಾರು ಕೂಡಾ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿಲ್ಲ ಎನ್ನುವುದನ್ನು ಖಾತರಿಪಡಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇನ್ನು "ಅನೇಕ ರಾಜ್ಯಗಳು ಕೃಷಿ ಬಗ್ಗೆ ಚರ್ಚಿಸಿವೆ, ಆದರೆ ಯಾರೂ ಕೃಷಿ ಕಾನೂನು ರದ್ದತಿಗೆ ಒತ್ತಾಯಿಸಿಲ್ಲ. ಆದರೆ ಬಿಹಾರ ಮತ್ತು ಸಿಕ್ಕಿಂನಂಥ ದೇಶಗಳು ಕೃಷಿ ಅವಲಂಬಿತ ರಾಜ್ಯಗಳಾಗಿದ್ದು, ಕೃಷಿ ಸುಧಾರಣೆಗೆ ಆಗ್ರಹಿಸಿವೆ" ಎಂದರು.