ಅಸ್ಸಾಂ, ಫೆ.21 (DaijiworldNews/PY): ಶಿವಲಿಂಗ ಆಕಾರದಲ್ಲಿ ಅಸ್ಸಾಂನಲ್ಲಿ ನಿರ್ಮಾಣವಾಗುತ್ತಿರುವ 136 ಅಡಿ ಎತ್ತರದ ಮಹಾಮೃತ್ಯುಂಜಯ ದೇವಾಲಯವು ಉದ್ಘಾಟನೆಗೆ ಸಜ್ಜಾಗಿದೆ.
ಫೆ.22ರಿಂದ ಮಾರ್ಚ್ 3ರವರೆಗೆ ಪ್ರತಿಷ್ಠಾಪನಾ ಕೈಂಕರ್ಯಗಳು ನೆರವೇರಲಿದ್ದು, ಫೆ.27ರಂದು ಮೃತ್ಯುಂಜಯ ದೇವರ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿಲಿದ್ದಾರೆ.
"ಈ ದೇವಾಲಯವು ವಿಶ್ವದ ಅತಿ ಎತ್ತರದ ಶಿವ ದೇವಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ" ಎಂದು ಕಾಸರಗೋಡಿ ಗೋಕುಲಂ ಗೋಶಾಲೆಯ ಪೂಚಕ್ಕಾಡು ವಿಷ್ಣು ಪ್ರಸಾದ್ ಹೆಬ್ಬಾರ್ ತಿಳಿಸಿದ್ದಾರೆ.
"ಹೆಬ್ಬಾರ್ ಅವರ ನೇತೃತ್ವದಲ್ಲಿ ಪರಂಪರಾ ವಿದ್ಯಾಪೀಠದ 250 ವೂದಿಕ ವಿದ್ವಾಂಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಕರ್ನಾಟಕದ 200 ವೈದಿಕರಿದ್ದಾರೆ. ಇದರ ಜೊತೆ ಕಾರ್ಯಕ್ರಮಕ್ಕೆ ಉತ್ತರ ಭಾರತದ 250 ವೈದಿಕರು ಆಗಮಿಸಲಿದ್ದಾರೆ" ಎಂದು ಹೇಳಿದ್ದಾರೆ.
ಈ ಸ್ಥಳದಲ್ಲಿ ಹಿರಣ್ಯಕಶಿಪು ತಪಸ್ಸು ಮಾಡಿರುವ ಸ್ಥಳ ಎನ್ನುವ ಪ್ರತೀತಿ ಇದೆ. ಭೃಗು ಗಿರಿ ಮಹಾರಾಜ್ ಎನ್ನುವ ಸಂತ ಈ ಜಾಗದಲ್ಲಿ ಸಣ್ಣ ಗುಡಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದರು. ಭೃಗು ಗಿರಿ ಮಹಾರಾಜ್ ಅವರ ಸಂಕಲ್ಪದಂತೆ ಅರ ಶಿಷ್ಯರು 17 ವರ್ಷಗಳಲ್ಲಿ ಬೃಹತ್ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಅಸ್ಸಾಂ ಸರ್ಕಾರವು, ದೇಗುಲ ನಿರ್ಮಾಣ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ಕೆ ಸಹಕರಿಸಿದೆ.
ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಾಲಯದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗ ಅವರು ಶತಚಂಡಿ ಹವನ ನೆರವೇರಿಸಲಿದ್ದಾರೆ. ಪ್ರತಿಷ್ಠಾಪನಾ ಕಾರ್ಯವನ್ನು ದೇಗುಲ ಟ್ರಸ್ಟ್ನ ಅಧ್ಯಕ್ಷ, ಹಿರಿಯ ಮುಖಂಡ ಹಿಮ೦ತ ಬಿಸ್ವ ಶರ್ಮ ನೇತೃತ್ವದ ಸಮಿತಿಯು ನೆರವೇರಿಸಲಿದ್ದು, ಪ್ರತಿಷ್ಠಾಂಗ ಕರ್ಮಗಳನ್ನು ತಿರುವನಂತಪುರದ ಅನಂತಶಯನ ದೇವಾಲಯದ ಪ್ರಧಾನ ಅರ್ಚಕರ ಪುತ್ರ ವಿನೀತ ಪಟ್ಟೇರಿ ಅವರು ನೆರವೇರಿಸಲಿದ್ದಾರೆ.