ನವದೆಹಲಿ, ಫೆ. 21 (DaijiworldNews/HR): ಕೊರೊನಾ ಸೋಂಕು ಪ್ರಕರಣಗಳು ಮಹಾರಾಷ್ಟ್ರ, ಪಂಜಾಬ್, ಚತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಮತ್ತೆ ಉಲ್ಬಣಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಪ್ರಕರಣಗಳು ಪತ್ತೆಯಾಗುತ್ತಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಫೆಬ್ರವರಿ 16 ರಿಂದ ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಜ.1ರ ನಂತರ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಶನಿವಾರ 6 ಸಾವಿರ ಪ್ರಕರಣಗಳು ವರದಿಯಾಗಿದ್ದು, ಸಾವಿನ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಇನ್ನು "ಮಹಾರಾಷ್ಟ್ರದಲ್ಲಿ 240 ಹೊಸ ವೈರಸ್ಗಳು ಕಾಣಿಸಿಕೊಂಡಿದ್ದು, ಕಳೆದ ವಾರದಿಂದ ರಾಜ್ಯದಲ್ಲಿ ಹೊಸದಾಗಿ ಸೋಂಕು ತಗುಲುತ್ತಿದೆ" ಎಂದು ಮಹಾರಾಷ್ಟ್ರದ ಕೊರೊನಾ ಟಾಸ್ಕ್ ಪೋರ್ಸ್ನ ಸದಸ್ಯ ಡಾ.ಶಶಾಂಕ್ ಜೋಶಿ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಕೂಡ ಕೊರೊನಾ ಸೋಂಕು ಪ್ರಕರಣ ಮತ್ತೆ ಏರುತ್ತಿದ್ದು, ಜ.1ರ ನಂತರ ಇದೇ ಮೊದಲಬಾರಿಗೆ 400 ಪ್ರಕರಣಗಳು ಒಂದೇ ದಿನದಲ್ಲಿ ಕಾಣಿಸಿಕೊಂಡಿದೆ. ಮಧ್ಯಪ್ರದೇಶ ಮತ್ತು ಚತ್ತೀಸಗಢದಲ್ಲಿಯೂ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ.
ಇನ್ನು ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಅದು ಮಹಾರಾಷ್ಟ್ರ ನಂತರದ (ಎರಡನೇ) ಸ್ಥಾನದಲ್ಲೇ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 4,500 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.