ಲಖನೌ, ಫೆ. 21 (DaijiworldNews/HR): ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲಕಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮೂವರು ಅಪ್ರಾಪ್ತ ದಲಿತ ಬಾಲಕಿಯ ದನಕರುಗಳಿಗೆ ಹಸಿರು ಮೇವು ತರಲು ಅರಣ್ಯಕ್ಕೆ ಹೋಗಿದ್ದು, ಅದರಲ್ಲಿ ಇಬ್ಬರು ಶವವಾಗಿ ಮತ್ತು ಮತ್ತೊಬ್ಬ ಬಾಲಕಿ ಅಸ್ವಸ್ಥಳಾಗಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಇದೀಗ ಅಸ್ವಸ್ಥಳಾಗಿದ್ದ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.
''ಈ ಪ್ರಕರಣದ ಪ್ರಮುಖ ಆರೋಪಿಗಳಾದ ವಿನಯ್ ಅಲಿಯಾಸ್ ಲಂಬು ಮತ್ತು ಆತನ ಸ್ನೇಹಿತನನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದೆ'' ಎಂದು ಎಎಸ್ ಪಿ ವಿಕೆ ಪಾಂಡೇ ತಿಳಿಸಿದ್ದಾರೆ.
ಇನ್ನು ಪ್ರೀತಿ ನಿರಾಕರಿಸಿದ ವಿಚಾರವಾಗಿ ಪ್ರಮುಖ ಆರೋಪಿ ನವೀನ್ ಎಂಬಾತ ಬಾಲಕಿಯರಿಗೆ ವಿಷ ನೀಡಿದ್ದ ಎನ್ನಲಾಗಿದ್ದು, ಪ್ರಕರಣದ ಆರೋಪಿಗಳಲ್ಲಿ ಓರ್ವ ಅಪ್ರಾಪ್ತ ಎಂದು ಹೇಳಲಾಗುತ್ತಿತ್ತು ಆದರೆ ಆತನ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಆತ ಅಪ್ರಾಪ್ತನಲ್ಲ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.