ಬೆಂಗಳೂರು, ಫೆ.21 (DaijiworldNews/MB) : ''ಬೇರೆ ಬೇರೆ ಸಮುದಾಯಗಳು ತಮಗೂ ಮೀಸಲಾತಿ ಬೇಕು ಎಂದು ಹೋರಾಡುತ್ತಿರುವುದು ದುರ್ದೈವದ ಸಂಗತಿ'' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಲಂಡನ್ನಲ್ಲಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಶನಿವಾರ ವರ್ಚುವಲ್ ರೂಪದಲ್ಲಿ ಆಯೋಜಿಸಿದ್ದ ''ಬಸವಣ್ಣ ಮತ್ತು ಅಂಬೇಡ್ಕರ್ ಸಂಸ್ಮರಣಾ'' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ಒದಗಿಸುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಮೀಸಲಾತಿ ಜಾರಿಗೆ ತಂದಿದ್ದು ಅದು ತಾತ್ಕಾಲಿಕ ಎಂದೂ ಕೂಡಾ ಅವರು ಹೇಳಿದ್ದರು. ಈಗ ರಾಜಕೀಯ ಹಿತಾಸಕ್ತಿಗಾಗಿ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಆರ್ಎಸ್ಎಸ್, ದಲಿತ ಸಂಘರ್ಷ ಸಮಿತಿಗಳು ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿವೆ'' ಎಂದು ಹೇಳಿದರು.
''ಸಾಮಾನ್ಯರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಅವರಿಗೆ ಪದ್ಮಶ್ರೀ, ಪದ್ಮಭೂಷಣದಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಆರಂಭಿಸಿದ್ದು ವಿದೇಶದಲ್ಲೇ ಇದ್ದು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವವರನ್ನು ಪರಿಗಣಿಸಿ ಪುರಸ್ಕಾರ ನೀಡಲಾಗುತ್ತದೆ'' ಎಂದು ಭರವಸೆ ನೀಡಿದರು.