ಧಾರವಾಡ, ಫೆ. 21 (DaijiworldNews/HR): "ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೇಳಿ ಬಂದಿದ್ದು, ಇಬ್ಬರೂ ಕರ್ನಾಟಕದ ಜನತೆಗೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು" ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.
ಈ ಕುರಿತು ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಉಲ್ಲೇಖಿಸದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅವರಿಬ್ಬರು ರಾಜಕೀಯದಲ್ಲಿ ದೊಡ್ಡ ಸ್ಥಾನ ಅಲಂಕರಿಸಿದ್ದು, ಈಗ ಇವರ ಹೆಸರುಗಳನ್ನು ಐಎಂಎ ನಿರ್ದೇಶಕ ತನಿಖೆ ವೇಳೆ ಹೇಳಿರುವುದಾಗಿ ತಿಳಿದು ಬಂದಿದೆ" ಎಂದರು.
ಇನ್ನು "ಈ ತನಿಖೆ ತಾರ್ಕಿಕ ಅಂತ್ಯಕ್ಕೆ ಬರಬೇಕು ಹಾಗೂ ಬಡ ಜನರಿಗೆ ನ್ಯಾಯ ಸಿಗಬೇಕು ಇಬ್ಬರು ರಾಜಕಾರಣಿಗಳು ಕರ್ನಾಟಕದ ಜನತೆಗೆ ಐಎಂಎ ನಿರ್ದೇಶಕನ ಹೇಳಿಕೆಗೆ ಉತ್ತರ ನೀಡಬೇಕು" ಎಂದು ಆಗ್ರಹಿಸಿದ್ದಾರೆ.