ನವದೆಹಲಿ, ಫೆ.21 (DaijiworldNews/MB) : ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಿಸರ ಕಾರ್ಯಕರ್ತೆ 22ರ ಹರೆಯದ ದಿಶಾ ರವಿ ವಕೀಲರಾದ ಸಿದ್ದಾರ್ಥ್ ಅಗರ್ವಾಲ್ ಅವರು, ರೈತರ ಪ್ರತಿಭಟನೆ ಬೆಂಬಲ ಸೂಚಿಸಿ ಅದನ್ನು ಜಾಗತಿಕವಾಗಿ ಬಹಿರಂಗಪಡಿಸಿರುವುದು ದೇಶದ್ರೋಹವಾದರೆ ದಿಶಾ ರವಿ ಅವರು ಜೈಲಿನಲ್ಲಿರುವುದು ಉತ್ತಮ ಎಂದು ಶನಿವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದ ದಿಶಾ ರವಿ ವಕೀಲರಾದ ಸಿದ್ದಾರ್ಥ್ ಅಗರ್ವಾಲ್, ''ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟಿಸ್ ಜತೆ ದಿಶಾ ರವಿ ನಂಟಿರುವ ಕುರಿತು ಯಾವುದೇ ಸಾಕ್ಷಿಗಳಿಲ್ಲ. ಯಾವುದೇ ವ್ಯಕ್ತಿಯೂ ಯಾವುದೇ ಒಂದು ನಿಖರ ಕಾರಣವಿಲ್ಲದೆ ಬಂಡಾಯಗಾರನಾಗಲಾರ. ಪರಿಸರ ಹಾಗೂ ಕೃಷಿ ನಡುವೆ ಪರಸ್ಪರ ಸಂಬಂಧವಿದೆ. ಅಷ್ಟಕ್ಕೂ ಜನವರಿ 26ರಂದು ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದಿರುವ ಗಲಭೆಗೆ ಟೋಲ್ ಕಿಟ್ ಕಾರಣ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಿಯಿಲ್ಲ'' ಎಂದು ವಾದಿಸಿದ್ದಾರೆ.
ಇನ್ನು ಎಫ್ಐಆರ್ನಲ್ಲಿ ಟೂಲ್ ಕಿಟ್ ಮೂಲಕ, ಯೋಗ ಹಾಗೂ ಚಹಾವನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪವಿದ್ದು ಇದನ್ನು ಉಲ್ಲೇಖ ಮಾಡಿ ದಿಶಾ ರವಿ ಪರ ವಕೀಲರು, ''ಇದೊಂದು ಅಪರಾಧವೇ'' ಎಂದು ನ್ಯಾಯಾಲಯವನ್ನು ಪ್ರಶ್ನಿಸಿದರು.
ಶನಿವಾರ ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಇದರ ತೀರ್ಪನ್ನು ಮಂಗಳವಾರ ಫೆ.೨೩ ಕ್ಕೆ ಕಾಯ್ದಿರಿಸಲಾಗಿದೆ. ವಿಚಾರಣೆ ವೇಳೆ ನ್ಯಾಯಾಲಯವು ''ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರಕ್ಕೂ ದಿಶಾ ರವಿಗೂ ನಂಟಿದೆ ಎಂಬುದಕ್ಕೆ ಸಾಕ್ಷಿ ಇದೆಯೇ'' ಎಂದು ಪೊಲೀಸರನ್ನು ಪ್ರಶ್ನಿಸಿದೆ.