ಬೆಂಗಳೂರು, ಫೆ.21 (DaijiworldNews/MB) : ಪ್ರಸಕ್ತ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಜುಲೈ 7 ಮತ್ತು 8ರಂದು ನಡೆಯಲಿದ್ದು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿ ಇನ್ನಿತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದ್ದು ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್ಸಿ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ನೋಡಿಕೊಂಡು ರಾಜ್ಯದ ಸಿಇಟಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ.
ರಾಜ್ಯದ ದ್ವಿತೀಯ ಪಿಯಸಿ ಪರೀಕ್ಷೆ ಮೇ 24ರಿಂದ ಜೂನ್ 10ರವರೆಗೆ, ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆ ಜೂನ್ 14ರಿಂದ ಜೂನ್ 25ರವರೆಗೆ, ಸಿಬಿಎಸ್ಸಿ 12ರ ತರಗತಿ ಪರೀಕ್ಷೆ ಮೇ 4ರಿಂದ ಜೂನ್ 2ರವರೆಗೆ, ಪಶ್ಚಿಮ ಬಂಗಾಳದ ಸಿಇಟಿ ಜುಲೈ 11ರಂದು, ಗೋವಾ ಸಿಇಟಿ ಮೇ ನಾಲ್ಕನೇ ವಾರದಲ್ಲಿ, ಜೆಇಇ(ಮೇನ್) ಫೆಬ್ರವರಿ 23ರಿಂದ ಮೇ 28ರವರೆಗೆ, ನೀಟ್ ಪರೀಕ್ಷೆ ಜುಲೈನಲ್ಲಿ, ಜೆಇಇ (ಅಡ್ವಾನ್ಸ್) ಜುಲೈ 3 ರಂದು ನಡೆಯಲಿದ್ದು ಈ ಎಲ್ಲಾ ವೇಳಾಪಟ್ಟಿಗಳನ್ನು ಗಮನಿಸಿ ಪ್ರಸಕ್ತ ಸಾಲಿನ ಸಿಇಟಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ವೇಳಾಪಟ್ಟಿ ಹೀಗಿದೆ:
7-7-2021 ಬುಧವಾರ ಬೆಳಗ್ಗೆ 10.30ರಿಂದ 11.50 - ಜೀವವಿಜ್ಞಾನ
7-7-2021 ಬುಧವಾರ ಮಧ್ಯಾಹ್ನ 2.30ರಿಂದ 3.50 - ಗಣಿತ
8-7-2021 ಗುರುವಾರ ಬೆಳಗ್ಗೆ 10.30ರಿಂದ 11.50 - ಭೌತ ವಿಜ್ಞಾನ
8-7-2021 ಗುರುವಾರ ಮಧ್ಯಾಹ್ನ 2.30ರಿಂದ 3.50 - ರಸಾಯನವಿಜ್ಞಾನ
9-7-2021 ಶುಕ್ರವಾರ ಬೆಳಗ್ಗೆ 11.30ರಿಂದ 12.30 - ಕನ್ನಡ (ಬೆಂಗಳೂರಿನಲ್ಲಿ ಮಾತ್ರ)
ಶನಿವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು, ''ರಾಜ್ಯದಲ್ಲಿ ಜುಲೈ 7 ಹಾಗೂ 8ರಂದು ಸಿಇಟಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಜುಲೈ 7 ರಂದು ಜೀವವಿಜ್ಞಾನ, ಗಣಿತ, ಜುಲೈ 8 ರಂದು ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಜುಲೈ 9ರಂದು ಕನ್ನಡ ಪತ್ರಿಕೆಯ ಪರೀಕ್ಷೆ ನಡೆಸಲಾಗುವುದು'' ಎಂದು ಮಾಹಿತಿ ನೀಡಿದ್ದರು.