ಲಕ್ನೋ, ಫೆ.20 (DaijiworldNews/MB) : ''ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲೂ ಬಿಜೆಪಿ ಪಕ್ಷ ರಾಮಮಂದಿರಕ್ಕಾಗಿ ಜನರಿಂದ ಚಂದಾ ವಸೂಲಿ ಮಾಡುತ್ತಿದೆ'' ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದು ಬಿಜೆಪಿಯವರನ್ನು 'ಚಂದಾಜೀವಿಗಳು' ಎಂದು ಕರೆದಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಈ ಸಂಕಷ್ಟ ಸಂದರ್ಭವನ್ನೂ ಬಿಜೆಪಿ ಬಂಡವಾಳವನ್ನಾಗಿಸಿದೆ. ಈ ಸಂದರ್ಭದಲ್ಲೂ ನಾವು ಅವಕಾಶ ಸೃಷ್ಟಿ ಮಾಡಿದ್ದೇವೆ ಎಂದು ಈ ಹಿಂದೆ ಬಿಜೆಪಿ ಸರ್ಕಾರವೇ ಹೇಳಿಕೊಂಡಿತ್ತು. ಹಾಗಾಗಿ ಈಗ ಕೊರೊನಾ ಸಂಕಷ್ಟ ಸಂದರ್ಭವನ್ನೂ ಅವಕಾಶವನ್ನಾಗಿ ಪರಿವರ್ತಿಸಿ ರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತಿದೆ'' ಎಂದು ಹೇಳಿದರು.
''ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಚಂದಾ ತೆಗೆದುಕೊಳ್ಳುವ ಯಾವುದೇ ಉಲ್ಲೇಖವಿಲ್ಲ. ನಮ್ಮಲ್ಲಿ ದಕ್ಷಿಣೆ ನೀಡುವ ಸಂಸ್ಕೃತಿ ಇದೆ. ಬಿಜೆಪಿ ಒಪ್ಪಿದರೆ ನಾವು ದಕ್ಷಿಣೆ ನೀಡಲು ಸಿದ್ದ'' ಎಂದು ಕೂಡಾ ಇದೇ ಸಂದರ್ಭದಲ್ಲಿ ಹೇಳಿದರು.