ಲಕ್ನೋ, ಫೆ.20 (DaijiworldNews/MB) : ''ಪ್ರಧಾನಿ ನರೇಂದ್ರ ಮೋದಿ ಹಳೆಯ ಕಥೆಗಳಲ್ಲಿನ ಅಹಂಕಾರಿ ರಾಜನಂತೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಮುಜಾಫರ್ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ''ರೈತರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರೂ ಕೂಡಾ ಪ್ರಧಾನಿ ಮೋದಿ ರೈತರ ಆಗ್ರಹವನ್ನು ಆಲಿಸುತ್ತಿಲ್ಲ. ಜನರು ಮೋದಿಯ ವಿರುದ್ದ ಮಾತನಾಡಲು, ಸತ್ಯ ಹೇಳಲು ಆತಂಕ ಪಡುತ್ತಾರೆ. ನಮ್ಮ ಪ್ರಧಾನಿಯೂ ಅಹಂಕಾರ ರಾಜನಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ'' ಎಂದು ದೂರಿದರು.
''ನಿಮ್ಮ ಹಕ್ಕುಗಳು ಕೊನೆಯಾಗಲಿದ್ದು, ಮೋದಿ ತನ್ನ ಇಬ್ಬರು–ಮೂವರು ಸ್ನೇಹಿತರಿಗೆ ಇಡೀ ದೇಶವನ್ನೇ ಮಾರಾಟ ಮಾಡಿದಂತೆ ನಿಮ್ಮನ್ನೂ ಹಾಗೂ ನೀವು ದುಡಿತವನ್ನೂ ಕೂಡಾ ತನ್ನ ಗೆಳೆಯರಿಗೆ ಮಾರಾಟ ಮಾಡಲಿದ್ದಾರೆ. ಮೋದಿಯವರಿಗೆ ಈ ದೇಶವನ್ನು ಕಾಯುವ ಯೋಧ ಕೂಡಾ ರೈತನ ಮಗ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ'' ಎಂದು ಕಿಡಿಕಾರಿದರು.
ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ವಿವಿಧ ಸಾಮಾಗ್ರಿಗಳ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರಿಯಾಂಕಾ ಗುಡುಗಿದರು.