ನವದೆಹಲಿ, ಫೆ.20 (DaijiworldNews/MB) : ಜಾಗತಿಕ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಹಂಚಿಕೊಂಡಿದ್ದ ರೈತರ ಪ್ರತಿಭಟನೆಯ ಟೂಲ್ ಕಿಟ್ಗೆ ಸಂಬಂಧಿಸಿ ನಿವಾಸಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಬೆಂಗಳೂರಿನ 22ರ ಹರೆಯದ ಪರಿಸರ ಕಾರ್ಯಕರ್ತೆ ದಿಶಾ ರವಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕಾಯ್ದಿರಿಸಿರುವ ನ್ಯಾಯಾಲಯ, ''ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರಕ್ಕೂ ದಿಶಾ ರವಿಗೂ ನಂಟಿದೆ ಎಂಬುದಕ್ಕೆ ಸಾಕ್ಷಿ ಇದೆಯೇ'' ಎಂದು ಪೊಲೀಸರನ್ನು ಪ್ರಶ್ನಿಸಿದೆ.
ಪಾಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು 3 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದರು. ಆದೇಶವನ್ನು ಮಂಗಳವಾರಕ್ಕೆ(ಫೆ.23)ಕಾಯ್ದಿರಿಸಿದರು.
ದೆಹಲಿ ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ''ದಿಶಾ ಅವರು ಖಲಿಸ್ತಾನಿ ಬೆಂಬಲಿತ ಸಂಘಟನೆ ಸಿಖ್ ಫಾರ್ ಜಸ್ಟಿಸ್ ಹಾಗೂ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ನೊಂದಿಗೆ ನಂಟು ಹೊಂದಿದ್ದಾರೆ. ರೈತರ ಪ್ರತಿಭಟನೆ ನೆಪದಲ್ಲಿ ಅವರು ಭಾರತದ ವಿರುದ್ದ ದ್ವೇಷಕ್ಕೆ ಪ್ರಚೋದನೆ ನೀಡುವ ಟೂಲ್ಕಿಟ್ ಅನ್ನು ರಚಿಸಿದ್ದಾರೆ. ಅವರು ಈ ಬಗ್ಗೆ ತಮ್ಮಲಿರುವ ದಾಖಲೆಗಳ ನಾಶಕ್ಕೆ ಯತ್ನಿಸಿದ್ದಾರೆ'' ಎಂದು ಹೇಳಿದರು.
ಅದಕ್ಕೆ ನ್ಯಾಯಾಲಯವು, ''ಜನವರಿ 26ರಂದು ನಡೆದಿರುವ ಹಿಂಸಾಚಾರಕ್ಕೂ ಟೂಲ್ ಕಿಟ್ಗೂ ಯಾವುದಾದರೂ ಸಂಬಂಧವಿರುವ ಬಗ್ಗೆ ಸಾಕ್ಷಿ ಇದೆಯೇ. ಇನ್ನೊಬ್ಬ ವ್ಯಕ್ತಿಯೊಂದಿಗೆ ಅಥವಾ ಸಂಘಟನೆಯೊಂದಿಗಿನ ಒಡನಾಟದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ದೋಷಾರೋಪಣೆ ಮಾಡಬಹುದೇ?'' ಎಂದು ಪ್ರಶ್ನಿಸಿದೆ.