ಬೆಂಗಳೂರು, ಫೆ.20 (DaijiworldNews/MB) : ಕೊಕೆನ್ ಸಾಗಾಟ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಬಂಧನಕ್ಕೆ ಒಳಗಾದ ಘಟನೆ ನಡೆದ ಹಿನ್ನೆಲೆ ಈ ಹಿಂದಿನ ಕೆಲವು ಘಟನೆಗಳನ್ನು ಉಲ್ಲೇಖಿಸಿ ಟ್ವೀಟ್ ಮೂಲಕ ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.
''ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ, ದೇಶಾದ್ಯಂತ ಡ್ರಗ್ಸ್ ಜಾಲ ಹರಡುವುದರಲ್ಲಿ 'ಅಮಲಿನ ಕಮಲ' ಬಿಜೆಪಿಯ ಪಾತ್ರ ದೊಡ್ಡದು!'' ಎಂದು ಹೇಳಿರುವ ಕಾಂಗ್ರೆಸ್, ಮಾಧ್ಯಮಗಳ ಸುದ್ದಿಗಳನ್ನು ಉಲ್ಲೇಖಿಸಿದೆ. ಹಾಸ್ಯ ನಟಿ ಭಾರತಿ ಸಿಂಗ್ ಡ್ರಗ್ಸ್ ಸೇವನೆ, ಸಾಗಣೆಯ ಆರೋಪದಲ್ಲಿ ಬಂಧನಕ್ಕೊಳಗಾದ ವಿಚಾರ ಉಲ್ಲೇಖಿಸಿರುವ ಕಾಂಗ್ರೆಸ್, ''ಈಕೆಗೂ ಬಿಜೆಪಿಗೂ ನಿಕಟ ಸಂಪರ್ಕ ಹಾಗೂ ಸ್ಟಾರ್ ಪ್ರಚಾರಕಿಯಾಗಿದ್ದರು'' ಎಂದು ಹೇಳಿದೆ.
''ತಮಿಳುನಾಡಿನ ಬಿಜೆಪಿ ಮುಖಂಡ ಆದೈಕ್ಕಲರಾಜ್ 1,800 ಕೆಜಿ ಅಫೀಮು ಸಾಗಣೆಯಲ್ಲಿ ಬಂಧನವಾಗಿತ್ತು'' ಎಂದು ಕೂಡಾ ಕಾಂಗ್ರೆಸ್ ಹೇಳಿದ್ದು, ''ತಮ್ಮ ಬಂಡವಾಳ ಬಯಲಾಗುತ್ತಿದ್ದಂತೆಯೇ ಬಿಜೆಪಿ ಆತನ ಉಚ್ಛಾಟನೆಯ ನಾಟಕವಾಡಿತ್ತು'' ಎಂದು ದೂರಿದೆ.
ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟಿ ರಾಗಿಣಿಯ ವಿಚಾರವನ್ನು ಕೂಡಾ ಟ್ವೀಟ್ ಮಾಡಿರುವ ಕಾಂಗ್ರೆಸ್, ''ನಟಿ ಹಾಗೂ ಬಿಜೆಪಿಯ ಸ್ಟಾರ್ ಪ್ರಚಾರಕಿ ಡ್ರಗ್ಸ್ ದಂಧೆಯ ಆರೋಪದಲ್ಲಿ ಬಂಧಿಸಲಾಗಿತ್ತು. ಈಕೆಯನ್ನು ರಕ್ಷಿಸಲು ಹಲವು ಬಿಜೆಪಿ ನಾಯಕರು, ಮಂತ್ರಿಗಳು ಲಾಭಿ ನಡೆಸಿದ್ದರು'' ಎಂದು ದೂರಿದೆ. "ಅಮಲಿನ ಕಮಲ" ಬಿಜೆಪಿ ಪಕ್ಷದಲ್ಲಿ "ಡ್ರಗ್ಸ್ ದಂಧೆ ಮೋರ್ಚಾ" ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ ಎಂದು ಲೇವಡಿ ಮಾಡಿದೆ.
''ಮಣಿಪುರದ ಬಿಜೆಪಿ ಮುಖಂಡನ ಭಾರಿ ಪ್ರಮಾಣದ ಡ್ರಗ್ಸ್ ದಂಧೆ ನಡೆದಿತ್ತು'' ಎಂದು ಹೇಳಿರುವ ಕಾಂಗ್ರೆಸ್, ''ದಿಟ್ಟ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಮಣಿಯದೆ 27 ಕೋಟಿ ಮೊತ್ತದ ಡ್ರಗ್ಸ್ನೊಂದಿಗೆ ಆತನನ್ನು ಬಂಧಿಸುತ್ತಾರೆ'' ಎಂದು ಹೇಳಿದೆ.
ಇನ್ನು ಕಂಗನಾ ರಣಾವತ್ ಡ್ರಗ್ಸ್ ಪ್ರಕರಣವನ್ನು ಉಲ್ಲೇಖಿಸಿರುವ ಕಾಂಗ್ರೆಸ್, ''ಬಿಜೆಪಿಯ ಆನಧಿಕೃತ ವಕ್ತಾರೆ ಕಂಗನಾ ರಣಾವತ್ ಡ್ರಗ್ಸ್ ದಂಧೆಯಲ್ಲಿ ಬಾಗಿಯಾಗಿರುವ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ, ಸ್ವತಃ ಈಕೆಯೇ ಡ್ರಗ್ಸ್ ಸೇವನೆಯನ್ನ ಒಪ್ಪಿದ್ದು ಸುದ್ದಿಯಾಗಿತ್ತು. ಈಕೆಯ ಪರ ಇಡೀ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಲೋಕಸತ್ಯ'' ಎಂದು ಆರೋಪಿಸಿದೆ.
''ಕಲಬುರ್ಗಿಯಲ್ಲಿ ಭಾರಿ ಪ್ರಮಾಣದ ಗಾಂಜಾ ದಂಧೆ ನಡೆಸುತ್ತಿದ್ದ ಬಜೆಪಿ ಕಾರ್ಯಕರ್ತನ ಬಂಧನವಾಗಿತ್ತು'' ಎಂದು ಕಾಂಗ್ರೆಸ್ ಹೇಳಿದ್ದು, ''ಇದು ಅಮಲಿನ ಕಮಲದ ಮಾದಕ ಜಾಲ ದೇಶಾದ್ಯಂತ, ರಾಜ್ಯಾದ್ಯಂತ ಹಬ್ಬಿರುವುದಕ್ಕೆ ಉದಾಹರಣೆ'' ಎಂದು ಕುಟುಕಿದೆ.