ರಾಯಚೂರು, ಫೆ.20 (DaijiworldNews/MB) : ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರು ಜಮೀನೊಂದಕ್ಕೆ ನುಗ್ಗಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅದರೊಳಗಿದ್ದ ಚಾಲಕ ಸಜೀವ ದಹನವಾದ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಸಿರವಾರ ತಾಲ್ಲೂಕು ಮಲ್ಲಟ ಗ್ರಾಮದ ಸದಾನಂದಗೌಡ ಮಾಲಿಪಾಟೀಲ (60) ಎಂದು ಗುರುತಿಸಲಾಗಿದೆ.
ಅವರು ರಾಯಚೂರಿನತ್ತ ತೆರಳುತ್ತಿದ್ದ ಸಂದರ್ಭ ಈ ಅನಾಹುತ ನಡೆದಿದೆ ಎಂದು ವರದಿಯಾಗಿದೆ.
ಈ ಅವಘಡ ಸಂಭವಿಸಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು ಕಾರು ಪೂರ್ತಿಯಾಗಿ ಬೆಂಕಿಗಾಹುತಿಯಾಗಿದ್ದ ಕಾರಣ ನಿಸ್ಸಹಾಯಕರಾದರು ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಬೇರೆಡೆ ಹರಡುವುದನ್ನು ತಡೆದರು. ಈ ಬಗ್ಗೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.