ಬೆಂಗಳೂರು, ಫೆ.20 (DaijiworldNews/PY): "ರಾಮಮಂದಿರಕ್ಕೆ ವಿರೋಧಿಸಿದ್ದ ನೀವು ಈಗ ಶ್ರದ್ಧೆ, ನಂಬಿಕೆ ಎಂದು ಊಸರವಳ್ಳಿಯಂತೆ ನಟಿಸುತ್ತಿದ್ದೀರಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಮಾನ್ಯ ಸಿದ್ದರಾಮಯ್ಯ, ದೇಶದ ನ್ಯಾಯಾಂಗ ವ್ಯವಸ್ಥೆಯ ಆಧಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಯಾವುದೇ ಪಕ್ಷ, ಸಂಘಟನೆಗಳಲ್ಲ. ನ್ಯಾಯಾಲಯವೇ ಸೂಚಿಸಿದ ಟ್ರಸ್ಟ್ ಮುಖೇನ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಜಕೀಯ ಲಾಭ ಪಡೆಯುತ್ತಿರುವುದು ನಿಮ್ಮಂತವರೇ ಹೊರತು ಬೇರಾರಲ್ಲ!" ಎಂದಿದೆ.
"ನ್ಯಾಯಾಲಯ ತೀರ್ಪು ನೀಡಿದ ಮೇಲೂ, ವಿವಾದಿತ ಜಾಗವೆನ್ನುವ ಮೂಲಕ ನಿಮ್ಮ ಅಲ್ಪ ಜ್ಞಾನವನ್ನು ಪ್ರದರ್ಶಿಸಿದ್ದೀರಿ. ನಿಮ್ಮ ನಾಲಿಗೆಯನ್ನು ನಿಯಂತ್ರಿಸಿಕೊಳ್ಳಿ. ಸ್ಥಿರತೆಯಿಲ್ಲದೆ ಮಾತನಾಡುವ ನಿಮ್ಮನ್ನು ಜನರು ತಿರಸ್ಕರಿಸಿದ್ದಾರೆ. ರಾಮಮಂದಿರಕ್ಕೆ ವಿರೋಧಿಸಿದ್ದ ನೀವು ಈಗ ಶ್ರದ್ಧೆ, ನಂಬಿಕೆ ಎಂದು ಊಸರವಳ್ಳಿಯಂತೆ ನಟಿಸುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದೆ.
"ನಮ್ಮೂರಿನಲ್ಲಿ ನಾನು ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇನೆ. ದೇವರ ಬಗ್ಗೆ ನಮಗೂ ಭಕ್ತಿ ಇದೆ, ನಮ್ಮ ಶ್ರದ್ಧೆ, ನಂಬಿಕೆಗಳು ವೈಯಕ್ತಿಕ ವಿಚಾರಗಳಾಗಿರಬೇಕೇ ಹೊರತು ರಾಜಕೀಯ ಅಸ್ತ್ರಗಳಾಗಬಾರದು. ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೊರಟಿರುವುದು ನಾಚಿಕೆಗೇಡು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.