ಬೆಂಗಳೂರು, ಫೆ.20 (DaijiworldNews/MB) : ''ರಾಜ್ಯದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳನ್ನು ಕೈ ಬಿಟ್ಟಿಲ್ಲ'' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಅವರು ಸ್ಪಷ್ಟನೆ ನೀಡಿದರು.
ಮಾಧ್ಯಮದಲ್ಲಿ ಕೆಲವು ಸುದ್ದಿಗಳು ಪ್ರಸಾರವಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ''ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆಯಿಂದ ಸುದ್ದಿ ಪ್ರಸಾರವಾಗಿದೆ. ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಆರನೇ ತರಗತಿಯ ಸಮಾಜವಿಜ್ಞಾನ ಭಾಗ–1ರ ಪಾಠದ ಪೀಠಿಕಾ ರೂಪದಲ್ಲಿ ಕೆಲವು ಅನಗತ್ಯ ಹಾಗೂ ಆ ವಿದ್ಯಾರ್ಥಿಗಳ ವಯೋಮಾನಕ್ಕೆ ಮೀರಿದ ಪಠ್ಯಾಂಶಗಳು ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲು ಸೂಚಿಸಲಾಗಿದೆ. ಅದನ್ನು ಹೊರತುಪಡಿಸಿ, ಭೌದ್ಧ, ಜೈನ ಧರ್ಮಗಳ ಪರಿಚಯದ ಪಾಠವನ್ನು ಕೈಬಿಡಬೇಕೆಂದು ಸೂಚಿಸಿಲ್ಲ. ಆ ಪಾಠಗಳು ಹಿಂದೆ ಇದ್ದಂತೆ ಪೂರ್ಣವಾಗಿಯೇ ಇರಲಿದೆ'' ಎಂದು ತಿಳಿಸಿದರು.
''ಪ್ರಸ್ತುತ 2016–17ನೇ ಸಾಲಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೊಂಡಂದಿನ ಪಠ್ಯಗಳೇ ಜಾರಿಯಲ್ಲಿದ್ದು ಯಾವುದೇ ಸಮುದಾಯದ ಪರಿಚಯ ಪಾಠಕ್ಕೆ ಕೋಕ್ ನೀಡಿಲ್ಲ. ಯಾವುದೇ ಧರ್ಮದ ಭಾವನೆಗೆ ಧಕ್ಕೆ ಉಂಟಾಗಬಾರದು ಹಾಗೂ ಮಕ್ಕಳಲ್ಲಿ ಅನಗತ್ಯ ದ್ವೇಷ ಉಂಟಾಗಬಾರದು ಎಂದು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಯಾವುದೇ ಧರ್ಮಕ್ಕೆ ಅವಹೇಳನ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ'' ಎಂದು ಹೇಳಿದರು.