ಬೆಳಗಾವಿ, ಫೆ.20 (DaijiworldNews/PY): "ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದು ವದಂತಿ" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಬಗ್ಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ರೀತಿಯಾದ ವಾದ ಆಗಿಲ್ಲ. ಈ ಬಗ್ಗೆ ಯಾರೋ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ. ಸಮಾಜದ ಹೋರಾಟಕ್ಕೆ ನನ್ನ ಬೆಂಬಲವಿದೆ" ಎಂದು ತಿಳಿಸಿದರು.
"ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹೊಸ ಪ್ರಬೇಧದ ಕೊರೊನಾ ಸೋಂಕು ಪತ್ತೆಯಾದ ಕಾರಣ ಗಡಿಯಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ" ಎಂದು ಹೇಳಿದರು.
"ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ್ರಾಜ್ಯ ಸಾರಿಗೆ ಈಗಾಗಲೇ ಪ್ರಾರಂಭವಾಗಿದೆ. ಮೊದಲಿನಂತೆ ಮುಂಜಾಗ್ರತೆ ವಹಿಸಿಕೊಳ್ಳಲು ಸೂಚಿಸಲಾಗಿದೆ" ಎಂದು ತಿಳಿಸಿದರು.
"ಗಡಿಯಲ್ಲಿ ಕನ್ನಡಿಗರ ಸಮೀಕ್ಷೆಯ ವಿಚಾರದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದಿಲ್ಲ. ಮಹಾರಾಷ್ಟ್ರ ಸರ್ಕಾರದವರು ಸಮೀಕ್ಷೆ ಮಾಡಿಕೊಂಡು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ಅಲ್ಲಿನ ಕನ್ನಡಿಗರಿಗೆ ತೊಂದರೆ ನೀಡಿದ ವೇಳೆ ನಾವು ಯೋಚಿಸುತ್ತೇವೆ. ನಮ್ಮ ಸರ್ಕಾರವು ಹೊರ ನಾಡ ಕನ್ನಡಿಗರೊಂದಿಗೆ ಎಂದಿಗೂ ಇರಲಿದೆ" ಎಂದರು.