ಮೈಸೂರು, ಫೆ.20 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಹೆಚ್.ವಿಶ್ವನಾಥ್ ಅವರು, "ನಾನು ಎನ್ನುವ ಅಹಂಕಾರ, ದರ್ಪ ನಿಮ್ಮನ್ನು ಈ ಮಟ್ಟಕ್ಕೆ ತಂದಿದೆ" ಎಂದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ತಾನೇ ಮುಂದಿನ ಸಿಎಂ ಆಗುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಎರಡು ವರ್ಷವಿದೆ. ಜನತೆ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂದು ಯಾರಿಗೆ ಗೊತ್ತು" ಎಂದು ಹೇಳಿದರು.
"ಸಿದ್ದರಾಮಯ್ಯ ಅವರ ಆಡಳಿತದ ಸಂದರ್ಭ ಕುರುಬರಿಗೆ ಆದಷ್ಟು ಅನ್ಯಾಯ ಎಂದಿಗೂ ಆಗಿಲ್ಲ. ತಮ್ಮ ಆಡಳಿತದ ಕೊನೆಯಲ್ಲಿ ಸಿಕ್ಕಿದ್ದಕ್ಕೆಲಾ ಹಣ ನೀಡಿ ಹೋದರು. ಮತ್ತೆ ಸಿಎಂ ಆಗುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಸಿದ್ದರಾಮಯ್ಯ ಅವರು ಕೇವಲ ಶಿಳ್ಳೆ ಹಾಗೂ ಕೇಕೆಗೆ ಮಾತ್ರ ಭಾಷಣ ಮಾಡುತ್ತಾರೆ. ನೀವು ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನಾ?" ಎಂದು ಪ್ರಶ್ನಿಸಿದರು.
"ಸಿದ್ದರಾಮಯ್ಯನ್ನು ಉದ್ದಾರ ಮಾಡಲು ಹೋಗಿ ನಾನು ಆಳಾದೆ. ನಿನ್ನನ್ನು ದೇವೇಗೌಡರು ಪಕ್ಷದಿಂದ ಹೊರಗೆ ಹಾಕಿದ್ದರು. ಹಲವಾರು ಮಂದಿಯ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆತಂದೆ" ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
"ಸಂಗೊಳ್ಳಿ ರಾಯಣ್ಣ ಅಭಿವೃದ್ದಿಗೆ ಸಿದ್ದರಾಮಯ್ಯ ಅವರು ನೀಡಿದ್ದು 10 ಕೋಟಿ.ರೂ ಮಾತ್ರ. ಕೇವಲ ಬಜೆಟ್ನಲ್ಲಿ ಮಾತ್ರ ಹೇಳುವುದಲ್ಲ. ಬದಲಾಗಿ ಅದಕ್ಕಾಗಿ ಹಣ ಮೀಸಲಿಡಬೇಕಿತ್ತು. ಅದು ಬಿಟ್ಟು ಸಮುದಾಯವನ್ನು ಉದ್ದಾರ ಮಾಡಿದವನು ನಾನೇ ಎಂದು ಹೇಳುವುದು ಸೂಕ್ತವಲ್ಲ" ಎಂದರು.