ಬೆಂಗಳೂರು, ಫೆ.19 (DaijiworldNews/MB) : ''ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಬಿಹಾರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್, ಆರ್ಜೆಡಿಗೆ ಧನಸಹಾಯ ನೀಡಿದ್ದರು'' ಎಂದು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ''ಯತ್ನಾಳ್ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಅವರ ಹೇಳಿಕೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ'' ಎಂದಿದ್ದಾರೆ.
ಫೆಬ್ರವರಿ 18 ರ ಗುರುವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಬಿಹಾರದ ಆರ್ಜೆಡಿ ಮತ್ತು ಕಾಂಗ್ರೆಸ್ಗೆ ವಿಜಯೇಂದ್ರ ಅವರು ನೀಡಿರುವ ಚುನಾವಣಾ ನಿಧಿಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಹಾಗೆಯೇ ತಾನು ಪಕ್ಷದಿಂದ ನೋಟಿಸ್ ಸ್ವೀಕರಿಸಿದ್ದೇನೆ. ಅದಕ್ಕೆ ಈಗಾಗಲೇ 11 ಪುಟಗಳ ಪತ್ರದಲ್ಲಿ ಉತ್ತರವನ್ನು ಕಳುಹಿಸಿದ್ದೇನೆ ಎಂದು ಕೂಡಾ ಯತ್ನಾಳ್ ತಿಳಿಸಿದರು.
"ಯಡಿಯೂರಪ್ಪರ ಕಾರಣದಿಂದಾಗಿ ಸರ್ಕಾರವು ಕೆಟ್ಟ ಹೆಸರು ಗಳಿಸುತ್ತಿರುವ ಬಗ್ಗೆ ನಾನು ಪತ್ರದಲ್ಲಿ ವಿವರಿಸಿದ್ದೇನೆ. ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರದು ಎಂದು ಮೋದಿ ಬಯಸುತ್ತಾರೆ ಆದರೆ ಇಲ್ಲಿನ ಸರ್ಕಾರ ಈ ತತ್ವಕ್ಕೆ ವಿರುದ್ದವಾಗಿದೆ" ಎಂದು ದೂರಿದರು.
"ನಾನು ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ 45 ಪ್ಯಾರಾಗಳಲ್ಲಿ ವಿವರಿಸಿದ್ದೇನೆ. ಯಡಿಯೂರಪ್ಪ ಅವರ ಕುಟುಂಬ ಬಿಜೆಪಿ ಶಾಸಕರಿಗೆ ಗೌರವ ನೀಡುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸಿದ್ದೇನೆ" ಎಂದರು.
''ಭ್ರಷ್ಟಾಚಾರ, ಕೌಟುಂಬಿಕ ಹಸ್ತಕ್ಷೇಪ ಮತ್ತು ವರ್ಗಾವಣೆ ವ್ಯವಹಾರದ ಬಗ್ಗೆಯೂ ತನಿಖೆ ನಡೆಸಬೇಕೆಂದು ಅವರು ಕೋರಿರುವುದಾಗಿ ಹೇಳಿದ್ದಾರೆ. ಹಾಗೆಯೇ ಈ ತಮ್ಮ ಪತ್ರದಲ್ಲಿ ಎಂದಿಗೂ ಕ್ಷಮೆಯಾಚಿಸಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
"ಸಿಡಿ, ಇಡಿ, ಮಾರಿಷಸ್ನ ಬಗ್ಗೆಯೂ ನಾನು ಪ್ರಸ್ತಾಪಿಸಿದ್ದೇನೆ. ಮಾರಿಷಸ್ಗೆ ಅವರು ಏಕೆ ಭೇಟಿ ನೀಡಿದ್ದರು. ಎಷ್ಟು ಮಂದಿ ಹೋಗಿದ್ದರು. ಅಲ್ಲಿ ಏನು ಮಾಡಿದರು ಎಂಬುದನ್ನು ಸರಿಯಾಗಿ ವಿವರಿಸಿದ್ದೇನೆ. ವಿವರವಾದ ತನಿಖೆ ನಡೆಸಲು ಪಕ್ಷಕ್ಕೆ ನಾನು ಒತ್ತಾಯಿಸಿದ್ದೇನೆ'' ಎಂದು ತಿಳಿಸಿದರು.
ಸ್ಪಷ್ಟನೆ ನೀಡಿದ ಅರುಣ್ ಸಿಂಗ್
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ''ಮಾಧ್ಯಮಗಳ ಗಮನ ಸೆಳೆಯಲು ಯತ್ನಾಳ್ ಕಳೆದ ಹಲವು ವರ್ಷಗಳಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ'' ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ''ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವುದರಿಂದ ವಿಜಯೇಂದ್ರ ಅವರನ್ನು ಬೆಂಬಲಿಸುವಲ್ಲಿ ಯಾವುದೇ ತಪ್ಪಿಲ್ಲ'' ಎಂದು ಹೇಳಿದ್ದು ಮತ್ತೊಂದು ಪ್ರಶ್ನೆಗೆ ಉತ್ತರಿಸುವಾಗ, ''ನಾಯಕರು, ಶಾಸಕರು, ಕಾರ್ಯಕರ್ತರು ಎಲ್ಲರೂ ಪಕ್ಷಕ್ಕೆ ಮುಖ್ಯ'' ಎಂದು ಹೇಳಿದರು.