ಮೈಸೂರು, ಫೆ.19 (DaijiworldNews/HR): "ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿಯಲ್ಲ" ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, "ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಮ್ಮೂರಲ್ಲಿ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂತೆಯೇ ಅನೇಕ ದೇವಸ್ಥಾನಗಳಿಗೆ ವೈಯಕ್ತಿಕವಾಗಿ ನಮ್ಮ ತಂದೆ ದೇಣಿಗೆ ನೀಡಿದ್ದಾರೆ" ಎಂದರು.
ಇನ್ನು "ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಯಾರು ದುಡ್ಡು ಕೊಟ್ಟಿದ್ದಾರೆ, ಯಾರು ಕೊಟ್ಟಿಲ್ಲ ಎಂದು ಕೇಳುವುದು ಸರಿಯಲ್ಲ, ಸಿದ್ದರಾಮಯ್ಯರಿಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಅವರು ಎಷ್ಟರ ಮಟ್ಟಿಗೆ ಹಿಂದೂಗಳೋ, ಅದಕ್ಕಿಂತ ಎರಡರಷ್ಟು ಹಿಂದೂಗಳು ನಾವು" ಎಂದು ಹೇಳಿದ್ದಾರೆ.