ಮಂಡ್ಯ, ಫೆ.19 (DaijiworldNews/MB) : ''ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು'' ಎಂದು ಡೆತ್ ನೋಟ್ ಬರೆದಿಟ್ಟು ತಾಲೂಕಿನ ಕೋಡಿದೊಡ್ಡಿ ಗ್ರಾಮದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದ್ದು ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಿದ್ದಾರೆ.
ಗುರುವಾರ ರಾಮಕೃಷ್ಣ ಆತ್ಮಹತ್ಯೆ ಶರಣಾಗುವ ಮೊದಲು ಡೆತ್ನೋಟ್ ಬರೆದಿದ್ದು ಇದರಲ್ಲಿ ''ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು'' ಎಂದು ಬರೆದಿದ್ದನು. ಅದರಂತೆ ತನ್ನ ಅಭಿಮಾನಿಯ ಕೊನೆಯ ಆಸೆ ಈಡೇರಿಸಲು ಸಿದ್ದರಾಮಯ್ಯನವರು ಮೃತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ''ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ತಮ್ಮ ಸಮಸ್ಯೆಯನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸಿದಂತೆ. ಸಾವಿನ ನಂತರವೂ ಸಮಸ್ಯೆ ಹಾಗೆಯೇ ಉಳಿಯುತ್ತೆ, ಆದರೆ ಅಮೂಲ್ಯ ಬದುಕೊಂದು ನಷ್ಟವಾಗುತ್ತೆ'' ಎಂದು ಹೇಳಿದ್ದಾರೆ.
''ಕಷ್ಟಗಳು ಬಂದಾಗ ಎದುರಿಸುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಬರಬೇಕು. ನೆನಪಿರಲಿ, ಸಮಸ್ಯೆಗಳು ತಾತ್ಕಾಲಿಕ, ಆದರೆ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು ಶಾಶ್ವತ'' ಎಂದಿದ್ದಾರೆ.
''ಸಮಸ್ಯೆಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡಾಗ ಇವನು ನನ್ನ ಅಭಿಮಾನಿ ಎಂದು ಹೇಳಲು ನಮಗೂ ಹೆಮ್ಮೆಯಾಗುತ್ತೆ. ಅಭಿಮಾನಿಯೊಬ್ಬನ ಸಾವು ಎಷ್ಟು ನೋವು ಕೊಡುತ್ತದೋ, ಆತ್ಮಹತ್ಯೆ ಅದರ ಎರಡು ಪಟ್ಟು ಕಾಡುತ್ತದೆ'' ಎಂದು ಹೇಳಿದ್ದಾರೆ.
''ಯಾರ ಅಭಿಮಾನಿಯೇ ಆಗಲಿ, ಯಾವ ಧರ್ಮ - ಸಿದ್ಧಾಂತವೇ ಇರಲಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಬೇಡ. ಪ್ರತೀ ಜೀವವೂ ಅಮೂಲ್ಯ. ಕತ್ತಲು ಕಳೆದ ನಂತರ ಬೆಳಕು ಬಂದಂತೆ, ಕಷ್ಟಗಳು ದೂರಾಗಲೇಬೇಕು. ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ'' ಎಂದು ಕಿವಿಮಾತು ಹೇಳಿದ್ದಾರೆ.
ಡೆತ್ನೋಟ್ನಲ್ಲಿ ರಾಮಕೃಷ್ಣ, ''ನಾನೆಲ್ಲರಿಗೂ ನೋವು ನೀಡಿದ್ದೇನೆ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ. ಅಣ್ಣನಿಗೆ ತಮ್ಮನಾಗಲಿಲ್ಲ. ಸ್ನೇಹಿತರಿಗೆ ಒಳ್ಳೆಯ ಗೆಳೆಯನಾಗಲಿಲ್ಲ. ನನ್ನ ಹುಡುಗಿಗೂ ಒಳ್ಳೆಯ ಸಂಗಾತಿ ಆಗಲಿಲ್ಲ. ಆ ಹಿನ್ನೆಲೆ ನಾನು ನಿಮ್ಮನ್ನು ಬಿಟ್ಟು ದೂರ ತೆರಳುತ್ತಿದ್ದೇನೆ. ನನ್ನನ್ನು ಎಲ್ಲರೂ ಕ್ಷಮಿಸಿ'' ಎಂದು ಬರೆದಿದ್ದು, ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ಬರೆಬೇಕೆಂದು ಕೂಡಾ ಉಲ್ಲೇಖಿಸಿದ್ದನು.