ಕಲಬುರ್ಗಿ, ಫೆ.18 (DaijiworldNews/PY): "ತೈಲ ಬೆಲೆ ಹೆಚ್ಚಾಗಿದ್ದರೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ" ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾರಿಗೆ ಸಂಸ್ಥೆಗಳಿಂದ ಬಸ್ ಪ್ರಯಣ ದರ ಹೆಚ್ಚಳ ಮಾಡುವಂತೆ ಪ್ರಸ್ತಾವ ಬಂದಿದ್ದು, ಆದರೆ, ಕೊರೊನಾ ಹಾಗೂ ನೈಸರ್ಗಿಕ ವಿಕೋಪಗಳ ಕಾರಣದಿಂದ ಈಗಾಗಲೇ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಹೀಗಿರುವಾಗ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ" ಎಂದರು.
"ಕಳೆದ ಬಾರಿಯ ಬಜೆಟ್ನಲ್ಲಿ ತಲಾ ಒಂದು ಸಾವಿರ ಹೊಸ ಬಸ್ಗಳನ್ನು ಸಾರಿಗೆ ಸಂಸ್ಥೆಯ ನಾಲ್ಕೂ ಘಟಕಗಳಿಗೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಕಾರಣದಿಂದ ಆ ಘೋಷಣೆ ಈಡೇರಲಿಲ್ಲ. ಈಗಾಗಲೇ ಶೇ.90ರಷ್ಟು ಬಸ್ಗಳ ಓಡಾಟ ಪ್ರಾರಂಭವಾಗಿದೆ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಪುನಃ ಮೊದಲಿಗೆ ಸ್ಥಿತಿಗೆ ಬರಬಹುದು. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ಈಶಾನ್ಯ ಸೇರಿದಂತೆ ವಾಯುವ್ಯ ಸಾರಿಗೆ ಸಂಸ್ಥೆಗಳಿಗೆ ಹಾಗೂ ಕೆಎಸ್ಆರ್ಟಿಸಿಗೆ ತಲಾ ಒಂದು ಸಾವಿರ ಬಸ್ಗಳನ್ನು ನೀಡಲಾಗುವುದು" ಎಂದು ತಿಳಿಸಿದರು.
"ಹಳೆಯ ಬಸ್ಗಳನ್ನು ಗುಜರಿಗೆ ಹಾಕುವ ಬದಲು ಸ್ವಲ್ಪ ಸುಧಾರಣೆ ಮಾಡಿ, ಸಾಮಾಜಿಕ ಉದ್ದೇಶಗಳಿಗಾಗಿ ಉಪಯೋಗ ಮಾಡುವ ಉಪಾಯ ಮಾಡಲಾಗಿದ್ದು, ಇಂತಹ ಬಸ್ಗಳನ್ನು ಶೌಚಾಲಯ, ಡೇ ಕೇರ್ ಸೆಂಟರ್, ಹಾಲುಣಿಸುವ ಮಹಿಳೆಯರ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗುವುದು" ಎಂದರು.