ನವದೆಹಲಿ, ಫೆ.18 (DaijiworldNews/PY): "ಪಶ್ಚಿಮಬಂಗಾಳ ಸಚಿವ ಜಾಕೀರ್ ಹುಸೇನ್ ಅವರ ಮೇಲೆ ನಡೆದ ದಾಳಿ ಪೂರ್ವ ಯೋಜಿತ ಸಂಚಿನಂತಿದೆ. ಈ ಬಗ್ಗೆ ಸತ್ಯ ಏನೆಂದು ತಿಳಿಯಬೇಕು" ಎಂದು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ದಾಳಿ ಒಂದು ಪೂರ್ವ ಯೋಜಿತ ಸಂಚಿನಂತಿದೆ. ಹುಸೈನ್ ಅವರಿಗೆ ಕೆಲವು ಜನರು ಬಿಜೆಪಿಗೆ ಸೇರುವಂತೆ ಒತ್ತಡ ಹೇರುತ್ತಿದ್ದರು" ಎಂದರು.
"ಸ್ಪೋಟ ನಡೆದ ಸಂದರ್ಭ ಯಾವ ಅಧಿಕಾರಿಗಳು ಕೂಡಾ ರೈಲ್ವೆ ನಿಲ್ದಾಣದಲ್ಲಿ ಇರಲಿಲ್ಲ. ಅಲ್ಲದೇ, ವಿದ್ಯುತ್ ಕೂಡಾ ತೆಗೆಯಲಾಗಿತ್ತು. ಜಾಕೀರ್ ಹುಸೇನ್ ಓರ್ವ ಜನಪ್ರಿಯ ಮುಖಂಡರಾಗಿದ್ದು, ವಿರೋಧಿಗಳು ಸಂಚು ಮಾಡಿ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದಾರೆ" ಎಂದು ಆರೋಪಿಸಿದರು.
ಫೆ.17ರ ಬುಧವಾರದಂದು ಮುರ್ಷಿದಾಬಾದ್ ನಿಮ್ತಿಟಾ ವಿಮಾನ ನಿಲ್ದಾಣ ಸಮೀಪ ಸಚಿವ ಜಾಕೀರ್ ಹುಸೇನ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದು ದಾಳಿ ಮಾಡಿದ್ದರು. ದಾಳಿಯ ಪರಿಣಾಮ ಗಂಭೀರ ಗಾಯಗೊಂಡಿದ್ದ ಹುಸೇನ್ ಅವರು ಕೋಲ್ಕತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಮಮತಾ ಬ್ಯಾನರ್ಜಿ ಅವರು ಹುಸೇನ್ ಅವರ ಆರೋಗ್ಯ ವಿಚಾರಿಸಿದರು.
ಘಟನೆಯಲ್ಲಿ ಗಾಯಗೊಂಡವರಿಗೆ ಐದು ಲಕ್ಷ.ರೂ ಹಾಗೂ ಸಣ್ಣ-ಪುಟ್ಟ ಗಾಯಗಳಾದವರಿಗೆ ಒಂದು ಲಕ್ಷ. ರೂ. ಪರಿಹಾರವನ್ನು ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.