ಬೆಂಗಳೂರು, ಫೆ.18 (DaijiworldNews/PY): ತೈಲ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಅವರು, "ಕೈಲಾಗದವರು ಮೈ ಪರಚಿಕೊಂಡರು. ಪ್ರಧಾನಿಯವರು ತಮ್ಮ ವೈಫಲ್ಯಕ್ಕೆ ಹಿಂದಿನ ಸರ್ಕಾರಗಳನ್ನು ಹೊಣೆ ಮಾಡುವ ಕೆಟ್ಟ ಚಾಳಿ ಬಿಟ್ಟಿಲ್ಲ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೈಲಾಗದವರು ಮೈ ಪರಚಿಕೊಂಡರು. ಪ್ರಧಾನಿಯವರು ತಮ್ಮ ವೈಫಲ್ಯಕ್ಕೆ ಹಿಂದಿನ ಸರ್ಕಾರಗಳನ್ನು ಹೊಣೆ ಮಾಡುವ ಕೆಟ್ಟ ಚಾಳಿ ಬಿಟ್ಟಿಲ್ಲ. 6ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿಯವರು ಸರ್ಕಾರಿ ಸಂಸ್ಥೆಗಳನ್ನು ಮಾರಿದ್ದು ಬಿಟ್ಟು, ತೈಲ ಆಮದು ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆಯೇ?. ಯಾಕೀ ಆತ್ಮವಂಚನೆ ಮೋದಿಯವರೆ?" ಎಂದು ಕೇಳಿದ್ದಾರೆ.
"2014 ರಲ್ಲಿ ಪೆಟ್ರೋಲ್ ಮೂಲ ಬೆಲೆ 47.12 ರಷ್ಟಿತ್ತು. ಇಂದು ಮೂಲಬೆಲೆ ₹29.34 ಕ್ಕೆ ಇಳಿದಿದೆ. ಆದರೆ ಹಾಲಿ ಸರ್ಕಾರ 200% ರಷ್ಟು ತೆರಿಗೆ ಹೆಚ್ಚಿಸಿ ತೆರಿಗೆ ಲೂಟಿ ಮಾಡುತ್ತಿರುವುದೇಕೆ?. ಆಮದಿನ ಬಗ್ಗೆ ಮಾತನಾಡುವ ಪ್ರಧಾನಿಯವರು ತೆರಿಗೆ ಹೆಚ್ಚಳದ ಬಗ್ಗೆಯೂ ಮಾತಾಡಲಿ" ಎಂದು ಒತ್ತಾಯಿಸಿದ್ದಾರೆ.
"ಪ್ರಧಾನಿಯವರು ನೈಸರ್ಗಿಕ ಅನಿಲ ಬಳಕೆಗೆ ಒತ್ತು ಕೊಡಲು ಹೇಳಿದ್ದಾರೆ. ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ಒಎನ್ಜಿಸಿಗೂ ಕುತ್ತು ಬಂತು ಎಂದರ್ಥ. ಲಾಭದಲ್ಲಿ ನಡೆಯುತ್ತಿರುವ ಒಎನ್ಜಿಸಿಯನ್ನು ಖಾಸಗೀಕರಣಗೊಳಿಸಲು ಈಗಿಂದಲೇ ಪೀಠಿಕೆ ಹಾಕುವಂತಿದೆ ಅವರ ಮಾತಿನ ಅರ್ಥ. ಉತ್ಪಾದನೆ ಹೆಚ್ಚಿಸುವ ನೆಪದಲ್ಲಿ ಒಎನ್ಗಿಸಿ, ಖಾಸಗಿಯವರಿಗೆ ಮಾರಾಟವಾದರೂ ಆಶ್ಚರ್ಯ" ಎಂದಿದ್ದಾರೆ.
"ತಮ್ಮ ಹುಳುಕು ಮುಚ್ಚಿಡಲು, ತಪ್ಪನ್ನು ಬೇರೆಯವರ ತಲೆಗೆ ಕಟ್ಟುವ ಕೆಟ್ಟ ಅಭ್ಯಾಸವನ್ನು ಪ್ರಧಾನಿಯವರು ಬಿಡಲಿ. ತೈಲಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣ ಎಂಬಂತೆ ಪೀಪಿ ಊದುವ ಪ್ರಧಾನಿಯವರು ಈ ಮೂಲಕ ತಮ್ಮದು ಕೇವಲ ಬಡಾಯಿ ಸರ್ಕಾರ ಎಂದು ತೋರಿಸಿದ್ದಾರೆ. ಮುಂದೊಂದು ದಿನ ಪ್ರಧಾನಿಯವರು ಬೆಲೆ ಏರಿಕೆಗೆ ಜನರೇ ಕಾರಣ ಎನ್ನಲು ಹಿಂಜರಿಯುವುದಿಲ್ಲ" ಎಂದು ಹೇಳಿದ್ದಾರೆ.