ನವದೆಹಲಿ, ಫೆ.18 (DaijiworldNews/PY): "ಭಾರತೀಯ ನೌಕಾಪಡೆಯು, ಇರಾನ್ ಹಾಗೂ ರಷ್ಯಾ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆಯೋಜಿಸಿರುವ ಎರಡು ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳುವುದಿಲ್ಲ" ಎಂದು ಗುರುವಾರ ಭಾರತೀಯ ನೌಕಾಪಡೆ ಹೇಳಿದೆ.
ಪ್ರಾತಿನಿಧಿಕ ಚಿತ್ರ
ಫೆ.16ರಂದು ಇರಾನ್-ರಷ್ಯಾ ಮ್ಯಾರಿಟಲ್ ಸೆಕ್ಯುರಿಟಿ ಬೆಲ್ಟ್-2021 ಎನ್ನುವ ಇರಾನ್ ಹಾಗೂ ರಷ್ಯಾದ ನೌಕಾ ತರಬೇತಿ ಆರಂಭವಾಗಿದ್ದು, ಭಾರತೀಯ ನೌಕಾಪಡೆ ಇದರಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ತಪ್ಪು ಎಂದು ನೌಕಾಪಡೆ ತಿಳಿಸಿದೆ.
ಭಾರತೀಯ ನೌಕಾಪಡೆಯ ಮನವಿಯ ಮೇರೆಗೆ ಆಯ್ದ ಗುಂಪಿನ ಹಡಗುಗಳ ಜೊತೆ ತರಬೇತಿಯಲ್ಲಿ ಭಾಗವಹಿಸಿದೆ ಎಂದು ಎರಡು ದಿನಗಳ ಹಿಂದೆ ಈ ಡ್ರಿಲ್ನ ವಕ್ತಾರ ಅಡ್ಮಿರಲ್ ಘೋಲಮ್ರೆಜಾ ತಹಾನಿ ಅವರು ತಿಳಿಸಿದ್ದರು. ಟೆಹ್ರಾನ್ನಲ್ಲಿ ಮಾತನಾಡಿದ್ದ ಇರಾನ್ನ ನೌಕಾಪಡೆಯ ಮುಖ್ಯಸ್ಥ ರಿಯಲ್ ಅಡ್ಮಿರಲ್ ಹೊಸೆನ್ ಖಾನ್ಜಾಡಿ ಅವರು, ಈ ವ್ಯಾಯಾಮಕ್ಕೆ ಭಾರತೀಯ ನೌಕಾಪಡೆ ಸೇರುತ್ತಿದೆ ಎಂದಿದ್ದರು. ಆದರೆ, ಭಾರತೀಯ ನೌಕಾಪಡೆ ಅವರ ಹೇಳಿಕೆಯನ್ನು ತಳ್ಳಿ ಹಾಕಿದೆ.
ಈ ತರಬೇತಿಯು ಸುಮಾರು 17,000 ಚದರ ಕಿ.ಮೀ ವಿಸ್ತೀರ್ಣದ ವ್ಯಾಪ್ತಿಯಲ್ಲಿ ನಡೆದಿದ್ದು, ಸಮುದ್ರ ಹಾಗೂ ವಾಯು ಗುರಿಗಳನ್ನು ಕೇಂದ್ರವನ್ನಾಗಿರಿಸಿಕೊಂಡು ನಾಶ ಪಡಿಸುವುದು, ಅಪಹರಿಸಿದ ಹಡಗುಗಳನ್ನು ಮುಕ್ತಗೊಳಿಸುವುದು, ಜೊತೆಗೆ ಶೋಧ ಮತ್ತು ಪಾರುಗಾಣಿಕಾ ಮತ್ತು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳನ್ನು ಈ ತರಬೇತಿಯಲ್ಲಿ ನಡೆಸಲಾಗಿತ್ತು.