ನವದೆಹಲಿ, ಫೆ.18 (DaijiworldNews/PY): ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ (73) ಅವರು ಬುಧವಾರ ರಾತ್ರಿ ಗೋವಾದಲ್ಲಿ ನಿಧನರಾಗಿದ್ದಾರೆ.
ಕ್ಯಾನ್ಸರ್ ಪೀಡಿತರಾಗಿದ್ದ ಆವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ರಾತ್ರಿ 8:16ಕ್ಕೆ ಗೋವಾದಲ್ಲಿ ನಿಧನರಾದರು. ಅವರ ಅಂತ್ಯ ಸಂಸ್ಕಾರ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ ಎಂದು ಸತೀಶ್ ಅವರ ಪುತ್ರ ಸಮೀರ್ ಹೇಳಿದ್ದಾರೆ.
ಸತೀಶ್ ಶರ್ಮಾ ಅವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಆಪ್ತರಾಗಿದ್ದರು. ಸತೀಶ್ ಅವರು, ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ 1993ರಿಂದ 1996ರ ತನಕ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಕೇಂದ್ರ ಸಚಿವರಾಗಿದ್ದರು.
ಸತೀಶ್ ಅವರು 1947ರ ಅಕ್ಟೋಬರ್ 11ರಂದು ಆಂಧ್ರ ಪ್ರದೇಶದ ಸಿಕಂದರಾಬಾದ್ನಲ್ಲಿ ಜನಿಸಿದ್ದು, ಅವರು ವೃತ್ತಿಪರ ಕಮರ್ಶಿಯಲ್ ಪೈಲಟ್ ಆಗಿದ್ದರು.
ಸತೀಶ್ ಅವರು ರಾಯ್ ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರು, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಮಧ್ಯ ಪ್ರದೇಶದಿಂದ ಮೂರು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು.
1986ರಲ್ಲಿ ಪ್ರಥಮ ಬಾರಿಗೆ ರಾಜ್ಯ ಸಭಾ ಸದಸ್ಯರಾದ ಸತೀಶ್ ಅವರು, 1991ರಲ್ಲಿ ರಾಜೀವ್ ಗಾಂಧಿ ಅವರು ನಿಧನರಾದ ನಂತರ ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಿ ಜಯಶಾಲಿಯಾಗಿದ್ದರು. ಬಳಿಕ ಜುಲೈ 2004ರಿಂದ 2016ರ ತನಕ ರಾಜ್ಯ ಸಭಾ ಸದಸ್ಯರಾಗಿದ್ದರು.
ಸತೀಶ್ ಶರ್ಮಾ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸತೀಶ್ ಶರ್ಮಾ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಸಂತಾಪ ಸೂಚಿಸಿದ್ದಾರೆ.