ನವದೆಹಲಿ, ಫೆ.18 (DaijiworldNews/MB) : ಕೇಂದ್ರದ ಮೂರು ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳುತ್ತಿದ್ದು ಇಂದು (ಫೆಬ್ರವರಿ 18) ಗುರುವಾರದಂದು ನಾಲ್ಕು ತಾಸಿನ ರಾಷ್ಟ್ರವ್ಯಾಪ್ತಿ ರೈಲ್ ರೋಕೋ (ರೈಲು ತಡೆ) ಚಳವಳಿಗೆ ಕರೆ ನೀಡಿದೆ. ಹಾಗೆಯೇ ಈ ಪ್ರತಿಭಟನೆ ಶಾಂತವಾಗಿ ನಡೆಸುವಂತೆ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಿಸಾನ್ ಆಂದೋಲನ ಸಮಿತಿಯ ವಕ್ತಾರ ಜಗ್ದಾರ್ ಸಿಂಗ್ ಬಜ್ವಾ, ''ಫೆ.18ರಂದು ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ರೈತರು ಶಾಂತಿಯುತವಾಗಿ ರೈಲು ರೋಕೋ ಚಳವಳಿ ನಡೆಸಲಿದ್ದಾರೆ. ಪ್ರಯಾಣಿಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ಉಪಹಾರಗಳನ್ನು ನೀಡಲಾಗುವುದು'' ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರುಗಳ ನಡುವೆ ನಡೆದ ಹಲವು ಹಂತದ ಮಾತುಕತೆ ವಿಫಲವಾಗಿದೆ.
ರೈತರು ಗಣರಾಜ್ಯೋತ್ಸವದ ದಿನವಾದ ಜನವರಿ 26 ರಂದು ಟ್ಯ್ರಾಕ್ಟರ್ ರ್ಯಾಲಿ ನಡೆಸಿದ್ದು ಈ ವೇಳೆ ಹಿಂಸಾಚಾರ ನಡೆದಿದೆ. ಓರ್ವ ರೈತ ಮುಖಂಡ ಸಾವನ್ನಪ್ಪಿದರೆ, ಹಲವು ಪೊಲೀಸರಿಗೆ ಗಾಯವಾಗಿದೆ.