ನವದೆಹಲಿ, ಫೆ.17 (DaijiworldNews/MB) : ಮದುವೆಗಾಗಿ ಮತಾಂತರ ತಡೆಯಲು ಕೆಲ ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಪ್ರತಿವಾದಿಗಳಾಗಿ ಸೇರಿಸುವುದಕ್ಕೆ ಎನ್ಜಿಒಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು ಒಪ್ಪಿಗೆ ಸೂಚಿಸಿದೆ.
ಹಾಗೆಯೇ ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆ ಜಮೀಯತ್ ಉಲೇಮಾ ಎ ಹಿಂದ್ಗೂ ಈ ಅರ್ಜಿಯಲ್ಲಿ ಪ್ರತಿವಾದಿಯಾಗಲು ಅನುಮತಿಸಿದೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಅಂತರ್ ಧರ್ಮದ ವಿವಾಹದಿಂದಾಗುವ ಮತಾಂತರಗಳನ್ನು ತಡೆಯಲು ಜಾರಿಗೆ ತಂದಿರುವ ಕಾನೂನುಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಜನವರಿ 6 ರಂದು ಅನುಮತಿ ನೀಡಿತ್ತು. ಮತಾಂತರ ನಿಷೇಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವಂತೆ ವಕೀಲ ವಿಶಾಲ್ ಠಾಕ್ರೆ ಮತ್ತು ಎನ್ಜಿಒ ಸದಸ್ಯರೊಬ್ಬರು ಸೇರಿದಂತೆ ಹಲವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.