ನವದೆಹಲಿ, ಫೆ.17 (DaijiworldNrews/HR): ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ಆರೋಪಿ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಮೀ ಟು ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಎಂಜೆ ಅಕ್ಬರ್ ಅವರು ದಾಖಲಿಸಿದ್ದು, ಅದನ್ನು ದೆಹಲಿ ಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
ಪ್ರಿಯಾ ರಮಣಿ ಅವರು 2018 ರಲ್ಲಿ ಮೀ ಟು ಅಭಿಯಾನದ ವೇದಿಕೆ ಮೂಲಕ ತಮಗೆ ಹಿಂದೊಮ್ಮೆ ಆಗಿದ್ದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿ, ಎಂಜೆ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಜೆ ಅಕ್ಬರ್ ಅವರು 2018ರ ಅಕ್ಟೋಬರ್ 15 ರಂದು ಪ್ರಿಯಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ಎನ್ನಲಾಗಿದೆ.
ಇನ್ನು ಈ ಪ್ರಕರಣದ ತೀರ್ಪನ್ನು ಇಂದು ಪ್ರಕಟಿಸಿದ ರವೀಂದ್ರ ಕುಮಾರ್ ಅವರು, "ಲೈಂಗಿಕ ಕಿರುಕುಳದಿಂದ ಸತ್ರಸ್ತರ ಮೇಲಾಗುವ ಪರಿಣಾಮವನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ದಶಕಗಳ ನಂತರವೂ ಮಹಿಳೆಗೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕಿದೆ" ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.