ವಿಜಯಪುರ, ಫೆ.17 (DaijiworldNews/MB) : ''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದು ಬಿಜೆಪಿಯಾಗಲಿ, ಆರ್ಎಸ್ಎಸ್ ಆಗಲಿ, ಯಾವುದೇ ಸ್ವಾಮೀಜಿಗಳು ನೀಡಿದ ಹೇಳಿಕೆಯಲ್ಲ. ಆದರೆ ಅಯೋಧ್ಯೆಯ ವಿವಾದಿತ ಪ್ರದೇಶ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ಗೆ ಅವಮಾನ ಮಾಡಿದ್ದಾರೆ'' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ''ಸುಪ್ರೀಂ ಕೋರ್ಟ್ ರಾಮ ಮಂದಿರ ವಿಚಾರದ ಈ ತೀರ್ಪು ನೀಡಿದ್ದರೂ ಈ ವಿಚಾರದಲ್ಲಿ ಈಗಲೂ ವಿವಾದಗಳು ಇವೆ. ಸುಪ್ರೀಂ ಕೋರ್ಟ್ ಹೇಳಿದೆ ಹಾಗಾಗಿ ರಾಮ ಮಂದಿರ ಕಟ್ಟಿಕೊಳ್ಳಲ್ಲಿ. ಇದರಲ್ಲಿ ನನ್ನದೇನು ತಕರಾರು ಇಲ್ಲ. ಆದರೆ ನಾನು ಬೇರೆ ರಾಮ ಮಂದಿರಕ್ಕೆ ದೇಣಿಗೆ ನೀಡುವೆ ಈ ರಾಮ ಮಂದಿರಕ್ಕೆ ನೀಡಲ್ಲ'' ಎಂದು ಹೇಳಿದ್ದರು.
ಬುಧವಾರ ವಿಜಯಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ ರಾಜ್ಯ ಪ್ರಕೋಷ್ಠಗಳ ಸಭೆ ಉದ್ಘಾಟಿಸಿ ಮಾತನಾಡಿದ ನಳಿನ್, ''ಈವರೆಗೆ ಕಾಂಗ್ರೆಸ್ಗೆ ಸ್ವಾತಂತ್ರ್ಯ ಸಂಗ್ರಾಮದ ಪುಣ್ಯ, ಮಹಾತ್ಮ ಗಾಂಧಿಯವರ ಪುಣ್ಯವಿತ್ತು. ಆದರೆ ಈಗ ಕಾಂಗ್ರೆಸ್ನ ಅಕೌಂಟ್ ಖಾಲಿಯಾಗಿದೆ'' ಎಂದು ಲೇವಡಿ ಮಾಡಿದರು.
''ಈ ಹಿಂದೆ ರಾಜ್ಯದಲ್ಲಿ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಯುತ್ತಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿದೆ'' ಎಂದು ಹೇಳಿದ ಅವರು, ''ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ರಾಷ್ಟ್ರ ಭಕ್ತರನ್ನು ಜೈಲಿಗೆ ಹಾಕಿದೆ, ಭ್ರಷ್ಟಾಚಾರ ಮಾಡಿದೆ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟಿದೆ, ಸಿಖ್ಖರ ಕಗ್ಗೊಲೆ ಮಾಡಿದೆ, ಕುಟುಂಬ ರಾಜಕಾರಣ ಮಾಡಿದೆ. ಆದರೆ ಈಗ ಅಧಿಕಾರವಿಲ್ಲದ ಸಂದರ್ಭ ಗಲಭೆ ಮಾಡುತ್ತಿದೆ'' ಎಂದು ದೂರಿದರು.
''ದೇಶದಲ್ಲಿ ಗಲಭೆ ಸೃಷ್ಟಿಸಲು, ಮೋದಿ ಹೆಸರು ಕೆಡಿಸಲು, ಕಳಂಕ ತರಲು ಸಂಚು ಹೀಡಲಾಗುತ್ತಿದೆ. ಇದಕ್ಕೆಲ್ಲ ಮೋದಿ ಭಯಪಡಲ್ಲ'' ಎಂದು ಗುಡುಗಿದರು.
ಇನ್ನು ಈ ಸಂದರ್ಭದಲ್ಲೇ, ''ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವಂತೆ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಯಂತ್ರಣ ಮಾಡುವ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ'' ಎಂದು ಹೇಳಿದರು.