ಸಿಧಿ, ಫೆ.17 (DaijiworldNews/MB) : ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ಸೇತುವೆ ಮೇಲಿಂದ ನಾಲೆಗೆ ಬಸ್ ಉರುಳಿದ ಪ್ರಕರಣದಲ್ಲಿ ಬುಧವಾರ ಮತ್ತೆರಡು ಮೃತಹೇಗಳು ಪತ್ತೆಯಾಗಿದ್ದು ಮೃತಪಟ್ಟ ಪ್ರಯಾಣಿಕರ ಸಂಖ್ಯೆ 49 ಕ್ಕೇರಿದೆ.
ಮಂಗಳವಾರ 20 ಮಹಿಳೆಯರು ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಸೇರಿದಂತೆ 47 ಮೃತದೇಹಗಳು ಹೊರತೆಗೆಯಲಾಗಿತ್ತು. ಬಳಿಕ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಬೆಳಿಗ್ಗೆ ಮತ್ತೆ ಮುಂದುವರಿಸಲಾಗಿದೆ. ಈ ಸಂದರ್ಭ ಬಸ್ ಮಗುಚಿ ಕಾಲುವೆಗೆ ಬಿದ್ದ 10 ಕಿಲೋ ಮೀಟರ್ ದೂರದಲ್ಲಿ ಮತ್ತೆರಡು ಶವಗಳು ಸಿಕ್ಕಿವೆ. ಒಟ್ಟು ಇಲ್ಲಿಯವರೆಗೆ 49 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಐವರಿಗಾಗಿ ಸಿಧಿ ಮತ್ತು ರೇವಾ ಜಿಲ್ಲೆಯ 25 ಕಿಲೋ ಮೀಟರ್ ಅಂತರದಲ್ಲಿ ಶೋಧ ನಡೆಯುತ್ತಿದೆ ಎಂದು ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಂಜುಲತಾ ಪಟ್ಲೆ ತಿಳಿಸಿದ್ದಾರೆ.
ಇನ್ನು ಈ ಘಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿಯನ್ನು ಪ್ರಧಾನ ಮಂತ್ರಿ ಘೋಷಿಸಿದ್ದಾರೆ. ಹಾಗೆಯೇ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.