ಲಕ್ನೋ, ಫೆ.17 (DaijiworldNews/MB) : ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಅಧಿಕಗೊಳ್ಳುತ್ತಿರುವ ಹಿನ್ನೆಲೆ ಇಂಟರ್ನೆಟ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರ ಮೇಲೆ ಕಣ್ಣಿಡಲು ಮತ್ತು ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಕಂಪನಿಯೊಂದನ್ನು ನೇಮಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂಟರ್ನೆಟ್ ಸರ್ಚಿಂಗ್ ಮೇಲೆ ಪೊಲೀಸರು ನಿಗಾವಿರಿಸಿದ್ದು, ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುವವರ ಮೇಲೆ ಹೆಚ್ಚಿನ ನಿಗಾ ಇರಿಸಿದ್ದಾರೆ. ಇದಕ್ಕಾಗಿ ಕಂಪನಿಯೊಂದನ್ನು ನೇಮಕ ಕೂಡಾ ಮಾಡಿದ್ದಾರೆ.
ಅಶ್ಲೀಲ ಚಿತ್ರ ವೀಕ್ಷಿಸುವವರ ಡಾಟಾ ಸಂಗ್ರಹಿಸಲಿರುವ ಪೊಲೀಸರು ಈ ಡೇಟಾವನ್ನು ಉತ್ತರ ಪ್ರದೇಶ ಮಹಿಳಾ ಪವರ್ ಲೈನ್ 1090 ಗೆ ನೀಡಲಿದ್ದಾರೆ. ಬಳಿಕ ಪವರ್ ಲೈನ್ ಮುಂದಿನ ಕ್ರಮ ಕೈಗೊಳ್ಳಲಿದೆ. ಇನ್ನು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ಕೂಡಾ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ 6 ಜಿಲ್ಲೆಗಳಲ್ಲಿ ಈಗಾಗಲೇ ಈ ಪ್ರಯೋಗವನ್ನು ಮಾಡಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸ್ ಹೆಚ್ಚುವರಿ ನಿರ್ದೇಶಕ ನೀರಾ ರಾವತ್, ಕಂಪನಿಯಿಂದ ಸಂಗ್ರಹಿಸಲಾಗುವ ಡೇಟಾದ ಮೂಲಕ ಅಂತರ್ಜಾಲದಲ್ಲಿ ಏನು ಹುಡುಕಲಾಗುತ್ತಿದೆ ಎಂಬುದರ ಮೇಲೆ ನಿಗಾ ಇಡಲು ನೆರವಾಗುತ್ತದೆ. ವ್ಯಕ್ತಿಯೋರ್ವ ಅಶ್ಲೀಲ ವಿಡಿಯೋ ನೋಡಿದರೆ ತಂಡವು ಆ ವ್ಯಕ್ತಿಯ ಮಾಹಿತಿ ಪಡೆಯಲಿದೆ. ಅವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.