ನವದೆಹಲಿ, ಫೆ.17 (DaijiworldNews/MB) : ಗಣರಾಜ್ಯೋತ್ಸವ ದಿನ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ತಂಡವು ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಬಂಧಿತ ವ್ಯಕ್ತಿ ಎಸಿ ಮೆಕ್ಯಾನಿಕ್ ಮಣಿಂದರ್ ಸಿಂಗ್ ಅಲಿಯಾಸ್ ಮೋನಿ (30 ವರ್ಷ).
ಈತನು ಖಡ್ಗ ಬೀಸುತ್ತಿದ್ದ ವೀಡಿಯೊಗಳು ಹಾಗೂ ಫೋಟೊಗಳು ಜನವರಿ 26ರಿಂದ ವೈರಲ್ ಆಗಿದ್ದು, ಇದು ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಕೆಂಪುಕೋಟೆಯ ಬಳಿ ಮೋನು ಖಡ್ಗವನ್ನು ಬೀಸುತ್ತಿರುವುದು ಎಂದು ಹೇಳಲಾಗಿದೆ.
''ಈತನನ್ನು ಮಂಗಳವಾರ ಪಿತಾಂಪುರ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ಹಾಗೆಯೇ ದೆಹಲಿಯ ಸ್ವರೂಪ್ ನಗರದಲ್ಲಿರುವ ಈತನ ನಿವಾಸದಿಂದ ಎರಡು ಖಡ್ಗಗಳನ್ನು ತನಿಖಾ ತಂಡ ವಶಕೆಕ ಪಡೆಯಲಾಗಿದೆ'' ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
''ಈತನು ತನ್ನ ಮನೆಯಲ್ಲಿ ಖಡ್ಗದ ತರಬೇತಿ ಶಾಲೆಯನ್ನು ನಡೆಸುತ್ತಿದ್ದ'' ಎಂದು ಪೊಲೀಸರು ಹೇಳಿದ್ದಾರೆ. ''ಹಾಗೆಯೇ ಆತ ವಿಚಾರಣೆಯ ವೇಳೆ ನಾನು ಕಳೆದ ಎರಡು ತಿಂಗಳುಗಳಿಂದ ಸಿಂಘು ಗಡಿಗೆ ಭೇಟಿ ನೀಡುತ್ತಿದ್ದೆ'' ಎಂದು ಹೇಳಿದ್ದಾನೆ.