ಬೆಂಗಳೂರು, ಫೆ.17 (DaijiworldNews/MB) : ''ನನ್ನ ಮಗಳು ಯಾವ ತಪ್ಪನ್ನೂ ಮಾಡಿಲ್ಲ. ನಾವು ಅತ್ಯಂತ ವಿನಮ್ರ ಹಿನ್ನೆಲೆಯುಳ್ಳ ಕುಟುಂಬದವರು'' ಎಂದು ದಿಶಾ ರವಿ ತಾಯಿ ಮಂಜುಳಾ ಅವರು ಹೇಳಿದ್ದಾರೆ.
ತಮ್ಮ ಮಗಳ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ''ದಿಶಾ ಕೃಷಿ ಕ್ಷೇತ್ರಗಳಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿರುವವಳು. ಈ ಹಿನ್ನೆಲೆ ಆಕೆ ಪ್ರಕೃತಿ ಸಂಬಂಧಿತ ವಿಚಾರಗಳು, ಹವಾಮಾನ ವೈಪರೀತ್ಯ ವಿಚಾರಗಳ ಕುರಿತು ಹೋರಾಟ ನಡೆಸಲು ಮುಂದಾಗಿದ್ದಳು. ದಿಶಾಳ ಅಜ್ಜಿ-ತಾತ ರೈತರಾಗಿದ್ದಾರೆ. ದೇಶದ ಶಾಂತಿಗೆ ಧಕ್ಕೆ ಉಂಟಾಗುವ ಯಾವುದೇ ವಿಚಾರವನ್ನು ಆಕೆ ಚಿಂತಿಸಿಯೂ ಇಲ್ಲ'' ಎಂದು ಹೇಳಿದ್ದಾರೆ.
ಇನ್ನು ದಿಶಾಗೆ ತಾಯಿ ಒಬ್ಬರೇ ಇದ್ದಾರೆ, ಕುಟುಂಬದಲ್ಲಿ ದುಡಿಯುವವರು ದಿಶಾ ಮಾತ್ರ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿ, ''ಆದರೇನು? ನನಗೆ ನನ್ನ ಮಗಳೇ ಎಲ್ಲಾ'' ಎಂದು ಹೇಳಿದರು.
''ವಕೀಲರು ಮಾಧ್ಯಮದಲ್ಲಿ ಈ ಪ್ರರಕಣದ ಬಗ್ಗೆ ಮಾತನಾಡದಂತೆ ತಿಳಿಸಿದ್ದಾರೆ. ಆದರೆ ನನ್ನ ಮಗಳು ಸುರಕ್ಷಿತವಾಗಿ ಮನೆಗೆ ಬರುವುದು ನನಗೆ ಮುಖ್ಯ'' ಎಂದರು.
ಟೂಲ್ ಕಿಟ್ ಸಂಬಂಧ ದಿಶಾ ರವಿಯನ್ನು ಬಂಧಿಸಲಾಗಿದ್ದು ಫೆಬ್ರವರಿ 19 ರಂದು ಪೊಲೀಸ್ ಕಸ್ಟಡಿ ಅಂತಿಮಗೊಳ್ಳಲಿದೆ. ಈಗಾಗಲೇ ಪೊಲೀಸರು ದಿಶಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಗೆಯೇ ಪೊಲೀಸರು ಎಫ್ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ರವಾನಿಸಿದ್ದಾರೆ.