ಪುದುಚೇರಿ, ಫೆ.17 (DaijiworldNrews/HR): ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಡಾ. ಕಿರಣ್ ಬೇಡಿ ಅವರನ್ನು ಪದಚ್ಯುತಿಗೊಳಿಸಲಾಗಿದ್ದು, ತೆಲಂಗಾಣದ ರಾಜ್ಯಪಾಲೆ ಡಾ. ತಮಿಳುಸಾಯಿ ಸುಂದರರಾಜನ್ ಅವರಿಗೆ ಸದ್ಯ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಪುದುಚೇರಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕಡಿಮೆ ಮತಕ್ಕೆ ಕುಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟವಾಗಿದ್ದು, ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಆಪ್ತರಲ್ಲೊಬ್ಬರಾದ ಎ. ಜಾನ್ಕುಮಾರ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ. ಜಾನ್ಕುಮಾರ್ ಸೇರಿ ಒಟ್ಟು ನಾಲ್ವರು ಶಾಸಕರು ಪಕ್ಷ ತೊರೆದಿದ್ದಾರೆ ಎನ್ನಲಾಗಿದೆ.
ಇನ್ನು ದೇಶದ ಮೊದಲ ಐಪಿಎಸ್ ಅಧಿಕಾರಿಯಾಗಿರುವ ಕಿರಣ್ ಬೇಡಿ ಅವರು 2015ರ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, 2016ರ ಮೇ 28ರಂದು ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.
ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಜನವರಿಯಲ್ಲಿ ಆರೋಪಿಸಿ ಕಿರಣ್ ಬೇಡಿ ವಿರುದ್ಧ ಅಹೋರಾತ್ರಿ ಪ್ರತಿಭಟನೆಯನ್ನೂ ಕೂಡ ನಡೆಸಿದ್ದರು ಎನ್ನಲಾಗಿದೆ.