ಬೆಂಗಳೂರು, ಫೆ.17 (DaijiworldNews/MB) : ಬೆಂಗಳೂರು ನಗರದಲ್ಲಿ ಅಪಾರ್ಟ್ಮೆಂಟ್ನ 103 ನಿವಾಸಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಪೈಕಿ ಹೆಚ್ಚಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬೊಮ್ಮನಹಳ್ಳಿಯ ಎಸ್ಎನ್ಎನ್ ಲೇಕ್ ವ್ಯೂ ಅಪಾರ್ಟ್ಮೆಂಟ್ಗಳ 1,052 ನಿವಾಸಿಗಳ ಪೈಕಿ 103 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
"ನಾವು ಅಪಾರ್ಟ್ಮೆಂಟ್ನ 1,052 ನಿವಾಸಿಗಳನ್ನು ಪರೀಕ್ಷಿಸಿದ್ದೇವೆ. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಮತ್ತು ಇತರರು ಕ್ಯಾರೆಂಟೈನ್ನಲ್ಲಿದ್ದಾರೆ. ಪಾಸಿಟಿವ್ ಆದವರನ್ನು ಪ್ರತ್ಯೇಕವಾಗಿರಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ದೃಢಪಟ್ಟವರ ಸಂಪರ್ಕವನ್ನು ಪತ್ತೆಹಚ್ಚು ಕಾರ್ಯ ನಡೆಸುತ್ತಿದ್ದೇವೆ ಎಂದು ಹೇಳಿದರು.
ಫೆಬ್ರವರಿ 4 ರಂದು ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಇದ್ದು, ಇದರಲ್ಲಿ ಹೆಚ್ಚಿನ ನಿವಾಸಿಗಳು ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಹ್ರಾಡೂನ್ಗೆ ಪ್ರವಾಸ ಹೋಗುವ ಸಲುವಾಗಿ ಕೆಲವರು ಪರೀಕ್ಷೆಗೆ ಒಳಪಟ್ಟಿದ್ದು ಇದರ ವರದಿ ಫೆಬ್ರವರಿ 10 ರಂದು ಬಂದಿದೆ. ಆ ಸಂದರ್ಭ ಸೋಂಕು ಇರುವುದು ದೃಢಪಟ್ಟಿದೆ. ತಕ್ಷಣ ಅಪಾರ್ಟ್ಮೆಂಟ್ ನಿವಾಸಿಗಳ ಕಲ್ಯಾಣ ಸಂಘವನ್ನು ಎಚ್ಚರಿಸಿದ್ದಾರೆ. ಬಿಬಿಎಂಪಿ ಸೂಚನೆಯಂತೆ ಕೂಡಲೇ ನಿವಾಸಿಗಳನ್ನು ಪರೀಕ್ಷಿಸಲಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಈ ಪೈಕಿ ಅಧಿಕ ಮಂದಿಗೆ ಸೋಂಕಿನ ಲಕ್ಷಣಗಳು ಇಲ್ಲ. ಹಾಗೆಯೇ ಅವರು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ. ಪ್ರಸ್ತುತ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಈ ಸ್ಥಳವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಿದ್ದೇವೆ. ದಿನಸಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸರಬರಾಜು ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದರು.
ಇನ್ನು ಈ ಪೈಕಿ ಯಾವುದಾದರೂ ರೂಪಾಂತರಿ ಕೊರೊನಾ ವೈರಸ್ ಆಗಿರುವ ಆತಂಕದ ಹಿನ್ನೆಲೆ ಈ ಮಾದರಿಗಳನ್ನು ನಿಮ್ಹಾನ್ಸ್ಗೆ ಕಳುಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸೋಂಕು ದೃಢಪಟ್ಟ 103 ಮಂದಿಯ ಪೈಕಿ 96 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದಾರೆ. ವೃದ್ಧರು, ಗರ್ಭಿಣಿಯರು, ಮಕ್ಕಳ ಮೇಲೇ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಎರಡನೇ ಕೊರೊನಾ ಕ್ಲಸ್ಟರ್ ಇದಾಗಿದೆ. ಫೆಬ್ರವರಿ 14 ರಂದು ಆರ್.ಟಿ.ಯ ನರ್ಸಿಂಗ್ ಕಾಲೇಜಿನಿಂದ 40 ವಿದ್ಯಾರ್ಥಿಗಳು (35 ಹುಡುಗಿಯರು ಮತ್ತು 5 ಹುಡುಗರಿಗೆ) ಕೊರೊನಾ ದೃಢಪಟ್ಟಿತ್ತು. ಇದಕ್ಕೂ ಮುನ್ನ ಮಂಗಳೂರಿನ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.