ಲಕ್ನೋ, ಫೆ.17 (DaijiworldNews/MB) : ಲಕ್ನೋದಲ್ಲಿ ಸ್ಫೋಟಕ್ಕೆ ಸಂಚು ಹೂಡಿದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಇಬ್ಬರು ಸದಸ್ಯರನ್ನು ಯುಪಿ ವಿಶೇಷ ಕಾರ್ಯಪಡೆ ಬಂಧಿಸಿದೆ.
ಮಂಗಳವಾರ ವಸಂತ ಪಂಚಮಿಯ ಸಂದರ್ಭದಲ್ಲಿ ರಾಜ್ಯದ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಇಬ್ಬರು ಆರೋಪಿಗಳು ಯೋಜಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಮಾಧ್ಯಮಕ್ಕೆ ಪತಿಕ್ರಿಯೆ ನೀಡಿದ್ದು, ''ಬಂಧಿತ ವ್ಯಕ್ತಿಗಳನ್ನು ಪಿಎಫ್ಐನ ಮಿಲಿಟರಿ ಕಮಾಂಡರ್ ಬದ್ರುದ್ದೀನ್ ಮತ್ತು ಆತನ ಸಹವರ್ತಿ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಅವರಿಬ್ಬರನ್ನು ಪಿಕ್ನಿಕ್ ಸ್ಪಾಟ್ ರಸ್ತೆಯಲ್ಲಿ ಬಂಧಿಸಲಾಗಿದೆ'' ಎಂದು ತಿಳಿಸಿದರು.
ಅವರ ಬಳಿ ಇದ್ದ ಹದಿನಾರು ಸ್ಫೋಟಕ ಸಾಧನಗಳು, 32 ಪಿಸ್ತೂಲ್ಗಳು ಹಾಗೂ ಲೈವ್ ಕಾಟ್ರೀಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಪ್ಯಾನ್ ಕಾರ್ಡ್ಗಳು ಮತ್ತು ಪ್ರಯಾಣ ದಾಖಲೆಗಳು ಸೇರಿದಂತೆ ಕೆಲವು ದೋಷಾರೋಪಣೆ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
''ಇಬ್ಬರು ಯುವಕರ ಸಣ್ಣ ಗುಂಪುಗಳನ್ನು ಮಾಡಿ ಅವರಿಗೆ ತರಬೇತಿ ನೀಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಹಿಂದೂ ನಾಯಕರನ್ನು ಅವರು ಗುರಿಯಾಗಿಸಲು ಯೋಜಿಸುತ್ತಿದ್ದರು'' ಎಂದು ಎಡಿಜಿ ಹೇಳಿದರು.
''ಇವರಿಬ್ಬರ ವಿವರವಾದ ವಿಚಾರಣೆಯ ನಂತರವೇ ಹೆಚ್ಚಿನ ಮಾಹಿತಿ ಲಭಿಸಲಿದೆ'' ಎಂದು ತಿಳಿಸಿದರು.