ಚಿಕ್ಕಮಗಳೂರು, ಫೆ.16 (DaijiworldNews/HR): "ಎಚ್.ಡಿ.ಕುಮಾರಸ್ವಾಮಿ ಅವರು ಮನಸ್ಸಿಗೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದು, ಅದು ಅವರಿಗೆ ಶ್ರೇಯಸಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳ ಮುಂದೆ ಮಾರ್ಕ್ ಹಾಕಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, "ಎಲ್ಲಿ, ಯಾರ ಮನೆಗೆ ಮೊಳೆ ಹೊಡೆಯಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಹೇಳಿಕೆ ಅವರ ಸ್ಥಾನ, ಘನತೆ, ಕುಟುಂಬಕ್ಕೆ ಗೌರವ ತರುವ ಸಂಗತಿಯಲ್ಲ. ಆತ್ಮವಂಚನೆಯಿಂದ ಮಾತನಾಡುವುದು ದುರದೃಷ್ಟಕರ" ಎಂದರು.
ಇನ್ನು "ಸ್ವಯಂಪ್ರೇರಿತವಾಗಿ ಜನರು ರಾಮಮಂದಿರಕ್ಕೆ ಹಣ ನೀಡುತ್ತಿದ್ದಾರೆ. ಗುರಿ ಇದ್ದದ್ದು 1,000 ಕೋಟಿ, ಆದರೆ ಈಗಾಗಲೇ 1511 ಕೋಟಿಗೂ ಅಧಿಕ ಸಂಗ್ರಹವಾಗಿದ್ದು, ಇನ್ನೂ 500 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಭಕ್ತಿಯಿಂದ ಕೊಡುವ ದೇಣಿಗೆ ಬೇಕೇ ಹೊರತು, ದಬಾಯಿಸಿ ತೆಗೆದುಕೊಳ್ಳುವ ಅಗತ್ಯ ಇಲ್ಲ" ಎಂದು ಹೇಳಿದ್ದಾರೆ.