ಬೆಂಗಳೂರು, ಫೆ.16 (DaijiworldNews/MB) : ''ಬೇರೆ ಕಡೆ ರಾಮಮಂದಿರ ಕಟ್ಟಿದರೆ ದುಡ್ಡು ಕೊಡುತ್ತಿದ್ದೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲು ನನ್ನ ಬಳಿ ಬಂದಿದ್ದರು. ಆಗ ನಾನು ಆ ವಿವಾದಾತ್ಮಕ ರಾಮ ಮಂದಿರಕ್ಕೆ ನಾನು ದುಡ್ಡು ನೀಡಲ್ಲ. ಬೇರೆ ರಾಮ ಮಂದಿರಕ್ಕಾದರೆ ನೀಡುತ್ತೇನೆ ಎಂದು ಹೇಳಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ಬೇಡ'' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರಸ್ತಾಪಿಸಿದ್ದು, ''ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ್ದರೂ ಈ ವಿಚಾರದಲ್ಲಿ ಈಗಲೂ ವಿವಾದಗಳು ಇವೆ. ಅದೇನು ರಾಮ ಮಂದಿರ ಅಲ್ಲೇ ಕಟ್ಟಬೇಕೇ ಬೇರೆ ಕಡೆ ಕಟ್ಟಿದರೆ ಏನಾಗುತ್ತದೆ'' ಎಂದು ಕೂಡಾ ಪ್ರಶ್ನಿಸಿದ ಅವರು ''ರಾಮ ಮಂದಿರವೆಂದರೆ ರಾಮ ಮಂದಿರವಷ್ಟೇ'' ಎಂದರು.
ಇನ್ನು ರಾಮ ಮಂದಿರ ಜನ್ಮಭೂಮಿ ಎಂಬ ನಂಬಿಕೆ ವಿಚಾರವಾಗಿ ಮಾತನಾಡಿದ ಅವರು, ''ನಮ್ಮೂರಿನಲ್ಲಿ, ನಿಮ್ಮೂರಿನಲ್ಲಿ ರಾಮ ಮಂದಿರ ಕಟ್ಟಿದರೆ ಆಗುವುದಿಲ್ಲವೇ? ಅಯೋಧ್ಯೆಯಲ್ಲೇ ಕಟ್ಟಾಬೇಕಾ? ಸುಪ್ರೀಂ ಕೋರ್ಟ್ ಹೇಳಿದೆ ಹಾಗಾಗಿ ರಾಮ ಮಂದಿರ ಕಟ್ಟಿಕೊಳ್ಳಲ್ಲಿ. ಇದರಲ್ಲಿ ನನ್ನದೇನು ತಕರಾರು ಇಲ್ಲ. ಆದರೆ ನಾನು ಬೇರೆ ರಾಮ ಮಂದಿರಕ್ಕೆ ದೇಣಿಗೆ ನೀಡುವೆ ಈ ರಾಮ ಮಂದಿರಕ್ಕೆ ನೀಡಲ್ಲ'' ಎಂದು ಹೇಳಿದರು.
''ಈ ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಮಾಡಿದ್ದಾರೆ. ಅದರ ಲೆಕ್ಕ ಈವರೆಗೆ ಸಾರ್ವಜನಿಕವಾಗಿ ಕೊಟ್ಟಿದ್ದಾರೆಯೇ?'' ಎಂದು ಕೂಡಾ ಪ್ರಶ್ನಿಸಿದರು. ''ಈ ಹಿಂದೆ ಇಟ್ಟಿಗೆ ತೆಗೆದುಕೊಂಡು ಹೋದವರು. ಇಟ್ಟಿಗೆ ಎಸೆದು ದುಡ್ಡನ್ನು ತಾವೇ ಜೇಬಲ್ಲಿ ಇರಿಸಿಕೊಂಡರು'' ಎಂದು ದೂರಿದರು.
''ಪಿಎಂ ಕೇರ್ನ ಲೆಕ್ಕವನ್ನೇ ಈವರೆಗೆ ಕೊಟ್ಟಿಲ್ಲ. ಇದಕ್ಕೆ ಯಾಕೆ ಲೆಕ್ಕ ಕೊಡುತ್ತಾರೆ'' ಎಂದು ಕೇಳಿದರು.