ನವದೆಹಲಿ, ಫೆ.16 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್ ವೇಳೆ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಂಜಾಬಿ ನಟ ದೀಪ್ ಸಿಧು ಅವರ ಪೊಲೀಸ್ ಕಸ್ಟಡಿಯನ್ನು ಏಳು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿಚಾರಣೆಗೆ ಮತ್ತು ಪ್ರಕರಣದ ಇತರ ಆರೋಪಿಗಳನ್ನು ಗುರುತಿಸಲು ಬಂಧನ ಅವಧಿಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಪೊಲೀಸರು ಸಿಧು ಅವರ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿ ಅವಧಿಯ ವಿಸ್ತರಣೆಗೆ ಮನವಿ ಮಾಡಿದರು ಎನ್ನಲಾಗಿದೆ.
ಇನ್ನು ಕೆಂಪು ಕೋಟೆಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಪ್ರಮುಖ ಪ್ರಚೋದಕರಲ್ಲಿ ಸಿಧು ಕೂಡ ಒಬ್ಬರು ಎಂದು ಪೊಲೀಸರು ಆರೋಪಿಸಿದ ನಂತರ ನ್ಯಾಯಾಲಯವು ಫೆಬ್ರವರಿ 9 ರಂದು ಸಿಧುನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಸಿಧು ಅವರು ಘಟನಾ ಸ್ಥಳದಲ್ಲಿ ಇದ್ದ ವಿಡಿಯೋಗಳಿವೆ ಎಂದು ಪೊಲೀಸರು ಹೇಳಿದ್ದಾರೆ.