ಬೆಂಗಳೂರು, ಫೆ.16 (DaijiworldNews/MB) : ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಮುಂಭಾಗದ ಚರಂಡಿ ದುರಸ್ತಿ ಸಂದರ್ಭ ಬಿಬಿಎಂಪಿ ಸಿಬ್ಬಂದಿಗೆ ಶವವೊಂದು ಪತ್ತೆಯಾಗಿದೆ. ಈ ಅಸ್ಥಿ ಪಂಜರವು ಸುಮಾರು ನಾಲ್ಕು ವರ್ಷ ಹಿಂದೆ ಮೃತಪಟ್ಟ ವ್ಯಕ್ತಿಯದ್ದಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಠಾಣೆಯ ಮುಂದೆ ಮುಚ್ಚಿದ ಮೋರಿಯೊಂದಿದ್ದು, ಕಸಗಳು ತುಂಬಿ ಚರಂಡಿ ನೀರು ಮುಂದೆ ಸಾಗುತ್ತಿರಲಿಲ್ಲ. ಈ ಹಿನ್ನೆಲೆ ಸೋಮವಾರ ಮಧ್ಯಾಹ್ನ ಬಿಬಿಎಂಪಿ ಸಿಬ್ಬಂದಿ ಮೋರಿಯ ಕಲ್ಲನ್ನು ತೆಗೆದು ಚರಂಡಿ ಸ್ವಚ್ಛಗೊಳಿಸಿದ್ದು ಈ ವೇಳೆ ಅಸ್ಥಿ ಪಂಜರ ಪತ್ತೆಯಾಗಿದೆ. ಆ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ''ಮೃತ ದೇಹದ ಡಿಎನ್ಐ ಹಾಗೂ ಮೃತ ದೇಹ ದೊರೆತ ಸ್ಥಳದಲ್ಲಿನ ಮಣ್ಣನ್ನು ಕೂಡ ಸಂಗ್ರಹಿಸಲಾಗಿದೆ. ಈ ಪ್ರದೇಶದಲ್ಲಿ ಚರಂಡಿ ಮೇಲೆ ಕಳೆದ ನಾಲ್ಕು ವರ್ಷಗಳ ಹಿಂದೆ ಚಪ್ಪಡಿಗಳನ್ನು ಹಾಕಲಾಗಿದ್ದು ಈ ಹಿನ್ನೆಲೆ 4 ವರ್ಷದಿಂದ ಇತ್ತೀಚಿನವರೆಗೂ ಕಾಣೆಯಾಗಿ ಪತ್ತೆಯಾಗದೇ ಇರುವ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೆ'' ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲಾ ಆಯಾಮಾದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.