ಬೆಂಗಳೂರು, ಫೆ.16 (DaijiworldNews/MB) : ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಹಲವು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಪರೀಕ್ಷೆ ನಡೆಸಲಾಗುತ್ತಿದೆ. ಪ್ರಸ್ತುತ ಬೊಮ್ಮನಹಳ್ಳಿಯ ಈ ಅಪಾರ್ಟ್ಮೆಂಟ್ನ 56 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಕೊರೊನಾ ದೃಢಪಟ್ಟವರು ಇತ್ತೀಚೆಗೆ ಆ ಅಪಾರ್ಟ್ಮೆಂಟ್ನಲ್ಲಿ ನಡೆದ ಪಾರ್ಟಿ ಒಂದರಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ದೃಢಪಡಿಸಿದ್ದು ಈ ಬಗ್ಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ''ಪ್ರಕರಣಗಳ ಸಂಖ್ಯೆ 56 ಕ್ಕೆ ಏರಿದೆ. ಮತ್ತಷ್ಟು ಹರಡುವಿಕೆಯನ್ನು ನಿಯಂತ್ರಿಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ'' ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.
ಮಂಗಳವಾರ ಇನ್ನೂ 200 ನಿವಾಸಿಗಳನ್ನು ಪರೀಕ್ಷಿಸಲಿದ್ದೇವೆ ಎಂದು ಬೊಮ್ಮನಹಳ್ಳಿ ಆರೋಗ್ಯ ಅಧಿಕಾರಿ ಡಾ.ಸವಿತಾ ತಿಳಿಸಿದ್ದಾರೆ. "56 ಮಂದಿಯಲ್ಲಿ ಯಾರಿಗೂ ಕೊರೊನಾ ಲಕ್ಷಣಗಳಿಲ್ಲ. ನಾವು ಮಾದರಿಗಳನ್ನು ನಿಮ್ಹಾನ್ಸ್ಗೆ ಕಳುಹಿಸಿದ್ದೇವೆ'' ಎಂದು ಹೇಳಿದ್ದಾರೆ.