ಬೆಂಗಳೂರು, ಫೆ.16 (DaijiworldNews/HR): 6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫೆಬ್ರವರಿ 22ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶಾಲೆ ಪ್ರಾರಂಭದ ಕುರಿತು ವಿಧಾನಸೌಧದಲ್ಲಿಂದು ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಫೆ.22ರಿಂದ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪೂರ್ಣ ಪ್ರಮಾಣದ ತರಗತಿ ಪ್ರಾರಂಭವಾಗಲಿದ್ದು, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಪ್ರದೇಶಗಳಲ್ಲಿ 6 ಮತ್ತು 7ನೇ ತರಗತಿ ಆರಂಭವಿಲ್ಲ. 8ನೇ ತರಗತಿ ಮಾತ್ರ ಪ್ರಾರಂಭವಾಗಲಿದೆ" ಎಂದರು.
ಇನ್ನು "9,10 ಹಾಗೂ ಪಿಯುಸಿಗೆ ವಿದ್ಯಾರ್ಥಿಗಳು ಸರಿಯಾಗಿ ಹಾಜರಾಗುತ್ತಿದ್ದು, ನಾವು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬರಬೇಕೆಂದು ಹೇಳಿರಲಿಲ್ಲ ಆದರೆ ವಿದ್ಯಾರ್ಥಿಗಳಿಂದ ಹಾಗೂ ಪೋಷಕರ ಕಡೆಯಿಂದ ಉತ್ತಮ ಸ್ಪಂದನೆ ಕಂಡು ಬಂದಿದೆ. ವಿದ್ಯಾಗಮದ ಫಲಿತಾಂಶಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
"ಪೋಷಕರು 1 ರಿಂದ 8ನೇ ತರಗತಿಯ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದು, 5 ಬಾರಿ ಆರೋಗ್ಯ ಇಲಾಖೆಯ ಅಧಿಕಾರಗಳ ಜೊತೆಗೆ ಹಾಗೂ ಟಾಸ್ಕ್ ಫೋರ್ಸ್ ಜೊತೆಗೆ ಸಭೆ ನಡೆಸಿ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು. ಶಾಲೆ ಪ್ರಾರಂಭವಾಗದ ಕಾರಣ ಯಾವೆಲ್ಲ ಪರಿಣಾಮಗಳು ಬೀರಲಿದೆ ಎನ್ನುವುದನ್ನು ತಿಳಿದುಕೊಳ್ಳಲು ದೇಶದ ವಿವಿಧ ಕಡೆಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿದ್ದು, ಈ ವೇಳೆ ಶೇ. 90ರಷ್ಟು ಮಕ್ಕಳು ವಿದ್ಯಾಬ್ಯಾಸವನ್ನೇ ಮರೆತಿದ್ದಾರೆ ಎಂದು ತಿಳಿದು ಬಂದಿದೆ" ಎಂದು ಸಚಿವರು ವಿವರಿಸಿದ್ದಾರೆ.